Site icon Vistara News

Karnataka Election : ಲಿಂಗಾಯತರನ್ನು ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಬಳಸಿದೆ: ಕುಮಾರ್‌ ಬಂಗಾರಪ್ಪ

#image_title

ಸೊರಬ : “ಲಿಂಗಾಯತ ಸಮಾಜಕ್ಕೆ ಒಬ್ಬ ವ್ಯಕ್ತಿಯನ್ನು ಜನನಾಯಕನನ್ನಾಗಿ ಮಾಡುವ ಶಕ್ತಿ ಇದೆ. ಕಾಂಗ್ರೆಸ್ ಮುಖಂಡರು ಲಿಂಗಾಯತ ಸಮುದಾಯದ ನಾಯಕರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆಯೇ ಹೊರತು ಬೆಳೆಸಲಿಲ್ಲ. ಬದಲಾಗಿ ನಿರ್ಲಕ್ಷಿಸಿದ್ದಾರೆ” ಎಂದು ಸೊರಬ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ (Karnataka Election) ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ವೀರಶೈವ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ಅವರು, “ವೀರಶೈವ-ಲಿಂಗಾಯತ ಎಂದು ಗುಂಪುಗಳನ್ನು ಸೃಷ್ಟಿಮಾಡಿದ ಕಾಂಗ್ರೆಸ್‌ನ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಹಗಲುಗನಸು. ಕಾಂಗ್ರೆಸ್ ದೇಶದಲ್ಲಿಯೇ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ರಾಜ್ಯದಲ್ಲಿಯೂ ನೆಲ ಕಚ್ಚಲಿದೆ. ಹಾಗಾಗಿ ಗ್ಯಾರಂಟಿ ಕಾರ್ಡ್ ಎನ್ನುವುದು ಬೋಗಸ್ ಕಾರ್ಡ್” ಎಂದು ವ್ಯಂಗ್ಯವಾಡಿದರು.

“ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಕ್ಷೇತ್ರ ಮತ್ತು ಸಮುದಾಯಗಳ ಅಭಿವೃದ್ಧಿಗೆ ಶಾಸಕನಾಗಿ, ಸಚಿವನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ದೃಷ್ಟಿಯಿಂದ ತಾಲೂಕಿನ 27 ವಿವಿಧ ಜಾತಿ-ಜನಾಂಗಗಳಿಗೂ ಹಣ ಬಿಡುಗಡೆ ಮಾಡಿದ್ದು, ಒಂದೇ ಸೂರಿನಡಿ ಅನುಭವ ಮಂಟಪದ ರೀತಿಯಲ್ಲಿ ಎಲ್ಲಾ ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆ ನನ್ನ ಮುಂದಿದೆ” ಎಂದರು.

ಇದನ್ನೂ ಓದಿ: Karnataka Election 2023: ಸಿದ್ದರಾಮನಹುಂಡಿಯಲ್ಲಿ ಕಾರ್-ಬೈಕ್ ಡಿಕ್ಕಿ ಜಗಳಕ್ಕೆ ಗಲಭೆ ಬಣ್ಣ ಕಟ್ಟಿದ ಬಿಜೆಪಿ; ಯತೀಂದ್ರ ಆರೋಪ
“ರೈತರು ವರ್ಷಕ್ಕೆ ಮೂರು ಫಸಲು ತೆಗೆಯಬೇಕು ಎನ್ನುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ 47 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದಂಡಾವತಿ ಯೋಜನೆಯನ್ನು ಮುಂದಿನ ಮೇ, ಜೂನ್‌ನಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಕಾಮಗಾರಿ ಆರಂಭವಾಗಿ ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಆ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ” ಎಂದು ಅವರು ಹೇಳಿದರು.

“ಕಳೆದ ಐದು ವರ್ಷಗಳ ಅವಧಿಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ನಿರ್ಮಿಸಲು ಹೆಚ್ಚಿನ ಮಹತ್ವ ನೀಡಿದ್ದು, ಪ್ರತೀ ಹಳ್ಳಿಯಲ್ಲಿ ಗುಂಡಿ ಮುಕ್ತ ರಸ್ತೆಯಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಸದ ಬಿ.ವೈ. ರಾಘವೇಂದ್ರ ಕಾರಣರಾಗಿದ್ದಾರೆ” ಎಂದರು.

ವೀರಶೈವ ಸಮಾಜದ ಮುಖಂಡ ಎಂ. ನಾಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ “ನಾವು ಮಾಡುವ ಮತದಾನ ಸಜ್ಜನರಿಗೆ ದೊರೆತು ಸಾರ್ಥಕತೆ ಪಡೆಯಬೇಕು. ಕಳೆದ ಚುನಾವಣೆಯಲ್ಲಿ ವೀರಶೈವ ಸಮಾಜದ ವತಿಯಿಂದ ತಾಲೂಕಿನ ಅಭಿವೃದ್ಧಿಯ ಬಗ್ಗೆ ಸಲ್ಲಿಸಿದ್ದ ಬೇಡಿಕೆಗಳು ಕುಮಾರ ಬಂಗಾರಪ್ಪ ಅವರಿಂದ ಈಡೇರಿದೆ. ಈ ಕಾರಣದಿಂದ ಅವರ ಋಣ ನಮ್ಮ ಮೇಲಿದೆ. ವೀರಶೈವ ಸಮಾಜ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಅವರನ್ನು ಬೆಂಬಲಿಸುವ ಮೂಲಕ ಋಣ ತೀರಿಸಬೇಕಿದೆ” ಎಂದರು.

ಇದೇ ಸಂದರ್ಭದಲ್ಲಿ ಕುಮಾರ್‌ ಬಂಗಾರಪ್ಪ ಅವರು ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. “ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡು ಅಂದರೆ ನಮ್ಮ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ, ಹೊಡಿ ಬಡಿ ಸಂಸ್ಕೃತಿ ಬೆಳೆಸಿಕೊಂಡು ರೌಡಿಸಂ ಮೂಲಕ ಮತದಾರರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ನಾವು ಶಾಂತಿ ಮತ್ತು ಅಭಿವೃದ್ದಿಯ ಮೂಲಕ ಜನರ ವಿಶ್ವಾಸ ಗಳಿಸಿದ್ದೇವೆ. 5 ವರ್ಷಗಳಿಗೊಮ್ಮೆ ಮುಖ ತೋರಿಸುವವರಿಗೆ ಜನತೆ ಮಣೆ ಹಾಕುವುದಿಲ್ಲ. ಚಟಕ್ಕಾಗಿ ರಾಜಕಾರಣಕ್ಕೆ ಬರಬಾರದು. ಅಂಥ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮತದಾರರ ಎಂದಿಗೂ ಬೆಂಬಲಿಸುವುದಿಲ್ಲ” ಎಂದು ದೂರಿದ್ದಾರೆ.

ಸಭೆಯಲ್ಲಿ ಲಿಂಗಾಯತ ಸಮಾಜದ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಎಪಿಎಂಸಿ ಮಾಜಿ ಸದಸ್ಯ ದಯಾನಂದಗೌಡ, ಎಂ.ಆರ್. ಪಾಟೀಲ್, ಮಹೇಶ್ ಮೂಡಿ, ಕಮನವಳ್ಳಿ ಮಂಜಪ್ಪ, ಶಿವಮೂರ್ತಿ ಗೌಡ್ರು, ಪಿಎಲ್‌ಡಿ ಬ್ಯಾಂಕ್ ಸದಸ್ಯ ನಂದೀಶ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ದೇವೇಂದ್ರಪ್ಪ ಚನ್ನಾಪುರ ಮೊದಲಾದವರು ಹಾಜರಿದ್ದರು.

Exit mobile version