ಸೊರಬ: “ತಾಲೂಕಿನ ಮತದಾರರು ದುರಹಂಕಾರಿ ಅಣ್ಣ-ತಮ್ಮಂದಿರ ಗೆಲುವಿಗೆ ವಿರಾಮ ನೀಡಿ ಹೊಸ ಮುಖವನ್ನು ಆರಿಸುವ ಮೂಲಕ ಜೆಡಿಎಸ್‍ಗೆ ಆಶೀರ್ವದಿಸಬೇಕು” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Karnataka Election) ಮನವಿ ಮಾಡಿದರು.
ಪಟ್ಟಣದಲ್ಲಿ ಸೊರಬ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರ ಪರವಾಗಿ ಹಮ್ಮಿಕೊಂಡಿದ್ದ ಮತಯಾಚನೆ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Karnataka Election 2023: ಬಜರಂಗದಳ ನಿಷೇಧ ಇಲ್ಲ ಎಂದ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ
“40 ವರ್ಷಗಳ ಪಾಚಿ ಕಟ್ಟಿದ ತಾಲೂಕಿನ ರಾಜಕಾರಣದಲ್ಲಿ ಹೊಸ ಬದಲಾವಣೆಯ ಪರ್ವಕ್ಕೆ 2023ರ ವಿಧಾನಸಭಾ ಚುನಾವಣೆಯವರೆಗೆ ಕಾಯುವಂತಾಗಿದೆ. ದಿ. ಎಸ್. ಬಂಗಾರಪ್ಪ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಬಾಸೂರು ಚಂದ್ರೇಗೌಡ ಅವರು ಸುಮಾರು 30 ಸಾವಿರ ಮತಗಳನ್ನು ಪಡೆಯುವ ಮೂಲಕ ಗೆಲುವಿನ ಅಂಚಿಗೆ ತಲುಪಿ ಪರಾಜಿತರಾಗಿದ್ದರು. ಅಂದು ಗೆದ್ದು ಸೋತ ಅವರನ್ನು ಈ ಚುನಾವಣೆಯಲ್ಲಿ ಮತದಾರರು ಕೈಬಿಡುವುದಿಲ್ಲ. ತಾಲೂಕಿನ ಕಳೆದ 10 ವರ್ಷಗಳ ರಾಜಕಾರಣದಲ್ಲಿ ಬಡವರ ಕಷ್ಟಗಳನ್ನು ಅರಿಯದ ದುರಹಂಕಾರಿ ಶಾಸಕರನ್ನು ನೋಡಿಯಾಗಿದೆ. ಈಗ ಪುನಃ ಬಿಜೆಪಿ-ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿರುವ ಸಹೋದರರಿಗೆ ನೀವು ಪಾಠ ಕಲಿಸಿ” ಎಂದು ಕರೆ ನೀಡಿದರು.
“ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನನ್ನನ್ನು ಅವರ ಮನೆಗೆ ಕರೆಸಿಕೊಂಡು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವಂತಹ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಇದ್ದರೆ ಅದು ನೀನು ಎಂದು ಹೇಳಿದ್ದರು. ಅಲ್ಲದೆ, ಇನ್ನಷ್ಟು ಶಕ್ತಿ ತುಂಬಲು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗುವುದಾಗಿ ತಿಳಿಸಿ ಆಶೀರ್ವಾದವನ್ನು ಮಾಡಿದ್ದರು. ಜತೆಗೆ ನನ್ನ ಮಗನನ್ನು ತಮ್ಮ ಮಡಿಲಿಗೆ ಹಾಕಿದ್ದೇನೆ, ಬೆಳೆಸುವುದು ನಿನ್ನ ಜವಾಬ್ದಾರಿ ಎಂದಿದ್ದರು. ನಾನು ಎಸ್. ಬಂಗಾರಪ್ಪ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಆದರೆ, ಆತ ನಂಬಿಕೆಗೆ ದ್ರೋಹ ಬಗೆದಿದ್ದಾನೆ” ಎಂದು ಮಧು ಬಂಗಾರಪ್ಪ ಅವರನ್ನು ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
“ಎಸ್.ಬಂಗಾರಪ್ಪ ಅವರು ಬದುಕಿದ್ದಾಗಲೇ ತಾಲೂಕಿನ ಮತದಾರರಿಂದ ತಿರಸ್ಕರಿಸಲ್ಪಟ್ಟಿದ್ದ ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ಗೆಲ್ಲಿಸಿಕೊಟ್ಟಿತ್ತು. ಆತನ ಏಳ್ಗೆಗೆ ಎಸ್.ಬಂಗಾರಪ್ಪ ಯಾವ ರೀತಿ ಶ್ರಮಿಸಬೇಕಿತ್ತೋ ಅದೇ ರೀತಿ ನನ್ನ ಸಹೋದರನೆಂದು ತಿಳಿದು ಎಲ್ಲ ರೀತಿಯ ಪ್ರಯತ್ನ ಮತ್ತು ವಿವಿಧ ಹುದ್ದೆಗಳನ್ನು ನೀಡಿದ್ದೇವೆ. ಆದರೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಜೆಡಿಎಸ್‍ನಲ್ಲಿ ರಾಜಕೀಯವಾಗಿ ಬೆಳೆಯದವನು ಕಾಂಗ್ರೆಸ್‍ನಲ್ಲಿ ಬೆಳೆಯಲು ಸಾಧ್ಯವೇ?” ಎಂದು ಕಿಡಿಕಾರಿದ ಅವರು, “ಪಕ್ಷಕ್ಕೆ ನಂಬಿಕೆ ದ್ರೋಹ ಬಗೆದ ಮಧು ಬಂಗಾರಪ್ಪ ಅವರನ್ನು ಮತ್ತು ಕಳೆದ ಐದು ವರ್ಷಗಳಲ್ಲಿ ದುರಹಂಕಾರಿಯಾಗಿ ಮೆರೆದ ಕುಮಾರ ಬಂಗಾರಪ್ಪ ಅವರನ್ನು ಸೋಲಿಸುವ ಮೂಲಕ ರೈತ ಕುಟುಂಬದಿಂದ ಬಂದ ಜನಪರ ಕಾಳಜಿಯ ಚಂದ್ರೇಗೌಡರನ್ನು ಬೆಂಬಲಿಸಿ, ವಿಧಾನಸೌಧಕ್ಕೆ ಕಳುಹಿಸಿಸಬೇಕು. ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸುವ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್, ತಾಲೂಕು ಅಧ್ಯಕ್ಷ ಶಿವಪ್ಪ ದ್ವಾರಳ್ಳಿ, ರಾಜ್ಯ ಕಾರ್ಯದರ್ಶಿ ಎನ್. ಕುಮಾರ್, ಹಾವೇರಿ ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ಶಾಂತಮ್ಮ ಮುದ್ದಪ್ಪ, ನಾಗರಾಜಗೌಡ ಮೊದಲಾದವರು ಹಾಜರಿದ್ದರು.