ತೀರ್ಥಹಳ್ಳಿ: ಕರ್ನಾಟಕವು ವಿಧಾನಸಭಾ ಚುನಾವಣೆಯ(Karnataka Election) ಹೊಸ್ತಿಲಲ್ಲಿದೆ. ಬಹುಮುಖ್ಯವಾದ ಮತದಾನದ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ಕೆಲವು ಗ್ರಾಮಗಳ ಜನರು ಚುನಾವಣೆ ಬಹಿಷ್ಕಾರ ಮಾಡುವುದಕ್ಕೆ ಮುಂದಾಗಿದ್ದಾರೆ. ತಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎನ್ನುವುದು ಅವರ ದೂರಾಗಿದೆ.
ಮೇಗರವಳ್ಳಿಯ ವ್ಯಾಪ್ತಿಯಲ್ಲಿ ಬರುವ ಅಣ್ಣುವಳ್ಳಿ, ಉದ್ದಿನ ಹಕ್ಲು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂದು ಸತತವಾಗಿ ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಸ್ಪಂದನೆ ನೀಡಿಲ್ಲ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: Karnataka Election: ಇತ್ಯರ್ಥವಾಗದ ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್; ಒಬ್ಬರಿಗೆ ಕೆಳಮನೆ, ಇನ್ನೊಬ್ಬರಿಗೆ ಮೇಲ್ಮನೆ ಭರವಸೆ
ಈ ಎರಡೂ ಗ್ರಾಮಗಳಲ್ಲಿ ಅಂದಾಜು 200 ಮಂದಿ ಸಾರ್ವಜನಿಕರು, ಶಾಲಾ ಮಕ್ಕಳು ಪ್ರತಿದಿನ ಬೇರೆ ಬೇರೆ ಸ್ಥಳಗಳಿಗೆ ಓಡಾಡುತ್ತಾರೆ. ಇಲ್ಲಿಂದ ತೀರ್ಥಹಳ್ಳಿ ಹಾಗೂ ಮೇಗರವಳ್ಳಿಗೆ ಸಂಪರ್ಕ ಮಾಡಲು ಒಂದು ಶಿಥಿಲಗೊಂಡ ಕಾಲು ಸೇತುವೆ ಇದೆ. ಇದನ್ನೂ ಸುಸ್ಥಿತಿಯಲ್ಲಿ ಇಟ್ಟಿಲ್ಲ. ಪ್ರತಿದಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುಗಿಯಬಹುದಾದ ಓಡಾಟಕ್ಕೆ 4 ಕಿಲೋ ಮೀಟರ್ ಸುತ್ತಾಡಿ ಬರಬೇಕಿದೆ. ಅಲ್ಲದೆ ಈಗ ಓಡಾಟ ನಡೆಸುತ್ತಿರುವ ದಾರಿಯಲ್ಲಿ ಖಾಸಗಿ ಜಮೀನು ಹೊಂದಿರುವವರು ಬೇಲಿ ಹಾಕಿಕೊಂಡಿದ್ದು, ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿ ಮತದಾನ ಬಹಿಷ್ಕಾರ ಮಾಡುವುದು ಅನಿವಾರ್ಯ ಎಂದು ಮುಖಂಡರಾದ ವೆಂಕಟೇಶ್ ಹೆಗ್ಡೆ, ಅಜಿತ್ ಅಣ್ಣುವಳ್ಳಿ ಮುಂತಾದವರು ಎಚ್ಚರಿಕೆ ನೀಡಿದ್ದಾರೆ.