ಸಾಗರ: ವಿಧಾನಸಭಾ ಚುನಾವಣೆ (Karnataka Election) ಬೆನ್ನಲ್ಲಿ ಎಲ್ಲೆಡೆ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳುಕೇರಿ ಗ್ರಾಮದ ನಿವಾಸಿಗಳು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಊರಿನ ಶಾಲೆಗೆ ಸೂಕ್ತ ಜಾಗ ಒದಗಿಸದೆ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಈ ನಿರ್ಧಾರ ತಿಳಿಸಿದ್ದಾರೆ.
ಮುಳುಕೇರಿಯಲ್ಲಿ 70 ವರ್ಷದಿಂದ ಶಾಲೆ ಇದ್ದು, ಅದಕ್ಕೆ ಸೂಕ್ತ ಮೂಲಭೂತ ಸೌಲಭ್ಯ ಇಲ್ಲ. ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ಕಪಕ್ಕದ ಗ್ರಾಮದಿಂದ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಎರಡು ಗುಂಟೆ ಜಾಗದಲ್ಲಿ ಶಾಲೆ, ಅಂಗನವಾಡಿ, ಬಿಸಿಯೂಟ ಕೊಠಡಿ, ಶೌಚಾಲಯ ಇದೆ. ಮಕ್ಕಳಿಗೆ ಆಟದ ಮೈದಾನ ಇಲ್ಲ. ಶಾಲೆಗೆ ಬೇರೆ ಜಾಗ ನೀಡಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದನ್ನೂ ಓದಿ: Karnataka Election: ಸಚಿವರಾಗಿ, ಸ್ಪೀಕರ್ ಆದವರು ಕ್ಷೇತ್ರಕ್ಕೆ ಏನನ್ನೂ ಕೊಟ್ಟಿಲ್ಲ: ಭೀಮಣ್ಣ ನಾಯ್ಕ ಕಿಡಿ
“ಈಚೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಹ ಶಾಲೆಗೆ ಪರ್ಯಾಯ ಜಾಗ ಕಲ್ಪಿಸಲು ಮನವಿ ಮಾಡಲಾಗಿದೆ. ಈಗಾಗಲೇ ಬೇರೆ ಜಾಗ ಶಾಲೆಗಾಗಿ ಗುರುತಿಸಲಾಗಿದೆ. ಗುರುತಿಸುವ ಜಾಗದಲ್ಲಿ ತಕರಾರು ಇದ್ದು, ಗ್ರಾಮಸ್ಥರ ಮೇಲೆ ಒತ್ತುವರಿದಾರರು ಪ್ರಕರಣ ದಾಖಲಿಸಿದ್ದಾರೆ. ನಮ್ಮ ಬೇಡಿಕೆ ಈಡೇರಿಸದೆ ಹೋದಲ್ಲಿ ನಾವು ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ” ಎಂದು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಸವೇಶ್ವರ ಗ್ರಾಮ ಸುಧಾರಣಾ ಸಮಿತಿಯ ಪ್ರಮುಖರಾದ ಬಸವರಾಜ್, ಅಣ್ಣಪ್ಪ, ಶಿವಕುಮಾರ್, ಕನ್ನಪ್ಪ ಮುಳಕೇರಿ, ಮಹಾಬಲಪ್ಪ, ಅಶೋಕ್, ಮಂಜುನಾಥ್, ದಿವಾಕರ್ ಇನ್ನಿತರರು ಹಾಜರಿದ್ದರು.