ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಸಭೆ ಆಯೋಜನೆ ಸಾಧ್ಯತೆ ಇದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈದೊಳಲು ಗ್ರಾಮದಲ್ಲಿ ಆಯೋಜಿಸಿದ್ದ ಆನವೇರಿ ಮಹಾಶಕ್ತಿ ಕೇಂದ್ರದ ಸಭೆ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ರಕ್ಷಣೆಯಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ” ಎಂದು ತಿಳಿಸಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ವರ್ಗದ ಜನರಿಗೂ ಅನ್ವಯ ಆಗುವಂತೆ ಮಹತ್ತರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಯೋಜನೆಯ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ರಾಜ್ಯ ಸರ್ಕಾರವು ಕ್ರಾಂತಿಕಾರಿ ನಿರ್ಣಯಗಳ ಮೂಲಕ ರಾಜ್ಯದ ಎಲ್ಲ ವರ್ಗದ ಜನರಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ” ಎಂದರು.
ಉತ್ತರಖಂಡ ಮಾಜಿ ಶಾಸಕ ಮುಖೇಶ್ ಸಿಂಗ್ ಕೋಲಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ, ದೂರದೃಷ್ಠಿಯ ಯೋಜನೆಗಳ ಪರಿಣಾಮ ಪ್ರತಿಯೊಂದು ಗ್ರಾಮ ಗ್ರಾಮಗಳಿಗೂ ಕೇಂದ್ರ ಸರ್ಕಾರದ ಅನುದಾನ ತಲುಪಿದೆ. ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಶಕ್ತಿಶಾಲಿ ಸದೃಢ ರಾಷ್ಟ್ರ ಕಟ್ಟುವಲ್ಲಿ ಮಹತ್ತರ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕ್ಷೇತ್ರ ಪ್ರಭಾರಿ ಎಸ್. ದತ್ತಾತ್ರಿ ಮಾತನಾಡಿ, “ಡಬಲ್ ಇಂಜಿನ್ ಸರ್ಕಾರದ ಯೋಜನೆಗಳು ಗ್ರಾಮಗಳಲ್ಲಿ ಇರುವ ಪ್ರತಿ ರೈತರಿಗೂ ತಲುಪಿದೆ. ಕೃಷಿ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೆರವು ನೀಡುತ್ತಿವೆ. ರೈತರಿಗೆ ಅಗತ್ಯವಿರುವ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಬಾರಿಯು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ನೀಡಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election : ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಅಶೋಕ ನಾಯ್ಕರಿಗೆ ಗ್ರಾಮಸ್ಥರಿಂದಲೇ ಸಾವಿರಾರು ರೂ. ದೇಣಿಗೆ
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, “ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಮುಖ್ಯ ಕಾರಣ ಬಿ.ಎಸ್. ಯಡಿಯೂರಪ್ಪ. ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಸ್‌ವೈ ಹಾಗೂ ಬಿವೈಆರ್, ರಾಜ್ಯ ಸರ್ಕಾರದ ಕೊಡುಗೆಯು ಅಪಾರ. ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಪಥ ನಿರಂತರವಾಗಿ ಮುನ್ನಡೆಯಲು ಹಾಗೂ ಸ್ಮಾರ್ಟ್ ಗ್ರಾಮಗಳ ನಿರ್ಮಾಣಕ್ಕೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು” ಎಂದು ಹೇಳಿದರು.
ಈ ವೇಳೆ ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ ಕಲ್ಲಜ್ಜನಾಳ್, ಗ್ರಾಮದ ಪ್ರಮುಖರಾದ ಜಗದೀಶಪ್ಪ, ನಂಜುಂಡಪ್ಪ, ಸದಾಶಿವಪ್ಪ, ಮಾರಪ್ಪ, ರಂಗೋಜಿರಾವ್, ದಾನಶೇಖರ್, ಸುಧಾಮಣಿ, ನಿರ್ಮಲಾ, ವಿರೂಪಾಕ್ಷಪ್ಪ, ಆನವೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.