Site icon Vistara News

Karnataka Election: ಸಾಗರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ದಲಿತ ಸಂಘರ್ಷ ಸಮಿತಿ

ದಲಿತ ಸಂಘರ್ಷ ಸಮಿತಿಯಿಂದ ಸುದ್ದಿಗೋಷ್ಟಿ

ಸಾಗರ: “ದಲಿತ ವಿರೋಧಿ ನೀತಿಯ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಿ ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಲಿದೆ” ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯ ಸಂಘದ ಸೂಚನೆಯಂತೆ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಹ ಸಮಿತಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರನ್ನು ಬೆಂಬಲಿಸಿದೆ. ಹಾಗಾಗಿ ಸಮುದಾಯದ ಜನರು ಕಾಂಗ್ರೆಸ್‍ಗೆ ಮತ ಚಲಾಯಿಸಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Election: 2018ರಲ್ಲಿ ಮನೆಗೆ ಬಂದು ಅಧಿಕಾರ ಕೊಟ್ಟು ಕೈ ಕೊಟ್ಟ ಕಾಂಗ್ರೆಸ್‌ ಈಗ ದುಷ್ಪರಿಣಾಮ ಎದುರಿಸುತ್ತೆ: ಎಚ್.ಡಿ. ದೇವೇಗೌಡ

“ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಕಲ್ಯಾಣಕ್ಕೆ ಪೂರಕವಾದ ಯಾವುದೇ ಯೋಜನೆ ಅನುಷ್ಠಾನಕ್ಕೆ ತಂದಿಲ್ಲ. ಒಳಮೀಸಲಾತಿ ಜಾರಿಗೆ ತಂದ ರಾಜ್ಯ ಸರ್ಕಾರ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದೆ. ಶೇಕಡವಾರು ಮೀಸಲಾತಿ ಕಸಿದುಕೊಂಡು ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ನಿರ್ಧಾರವನ್ನು ಸಮಿತಿ ತೀವ್ರವಾಗಿ ಖಂಡಿಸುತ್ತಿದೆ. ಚುನಾವಣಾ ಸಂದರ್ಭದಲ್ಲಿ ಒಳಮೀಸಲಾತಿ ಹಂಚಿಕೆ ರಾಜ್ಯಸರ್ಕಾರದ ಗಿಮಿಕ್ ಆಗಿದ್ದು, ಪ್ರಜ್ಞಾವಂತ ದಲಿತ ಸಮುದಾಯಕ್ಕೆ ಬಿಜೆಪಿ ಮನಸ್ಥಿತಿ ಅರ್ಥವಾಗಿದೆ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಸಮುದಾಯದ 25ರಿಂದ 30ಸಾವಿರ ಮತಗಳಿವೆ. ಈ ಮತಗಳನ್ನು ಆಮಿಷವೊಡ್ಡಿ ಖರೀದಿ ಮಾಡಬಹುದು ಎಂದು ಬಿಜೆಪಿಯವರು ತಿಳಿದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ” ಎಂದರು.

ಸಮಿತಿಯ ಸಂಘಟನಾ ಸಂಚಾಲಕ ರವಿ ಜಂಬಗಾರು ಮಾತನಾಡಿ, “ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಯೋಗ್ಯ ವ್ಯಕ್ತಿಯನ್ನು ಗುರುತಿಸಿ ಮತದಾನ ಮಾಡಬೇಕು. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಗಣಪತಿ ಕೆರೆ ಅಭಿವೃದ್ದಿ ಹೆಸರಿನಲ್ಲಿ ತಮ್ಮ ಜಾಗ ರಕ್ಷಣೆ ಮಾಡಿಕೊಂಡಿದ್ದಾರೆ. ನಗರಸಭೆಯಲ್ಲಿ ಚುನಾವಣೆ ಸಮೀಪಿಸುತ್ತಿದೆ ಎಂದು ಆಶ್ರಯ ನಿವೇಶನಕ್ಕೆ ಅರ್ಜಿ ಕರೆದಿದ್ದು, ನಾಲ್ಕರಿಂದ ಐದು ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಯಾರಿಗೂ ನಿವೇಶನ ಕೊಟ್ಟಿಲ್ಲ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಇಕ್ಕೆಲಗಳಲ್ಲಿರುವ ಮರಗಳನ್ನು ಸ್ಥಳಾಂತರ ಮಾಡಿ ಬೆಳೆಸಲಾಗುತ್ತದೆ” ಎಂದು ಶಾಸಕರು ನೀಡಿದ ಭರವಸೆ ಹುಸಿಯಾಗಿದೆ ಎಂದು ದೂರಿದರು.

ಇದನ್ನೂ ಓದಿ: Karnataka Election: ಸಚಿವರಾಗಿ, ಸ್ಪೀಕರ್‌ ಆದವರು ಕ್ಷೇತ್ರಕ್ಕೆ ಏನನ್ನೂ ಕೊಟ್ಟಿಲ್ಲ: ಭೀಮಣ್ಣ ನಾಯ್ಕ ಕಿಡಿ

ಗೋಷ್ಠಿಯಲ್ಲಿ ವೆಂಕಟೇಶ್, ರಾಘವೇಂದ್ರ ಆವಿನಹಳ್ಳಿ, ಮಂಜಪ್ಪ ಗಾಂಧಿನಗರ, ವೆಂಕಟೇಶ್, ಮಹಾದೇವಪ್ಪ, ರೋಸಯ್ಯ ಹಾಜರಿದ್ದರು.

Exit mobile version