ತೀರ್ಥಹಳ್ಳಿ: “ತೀರ್ಥಹಳ್ಳಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಂಡಗದ್ದೆ ಬಳಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಓರ್ವ ಅಪರಿಚಿತ ವ್ಯಕ್ತಿ ವೇದಿಕೆಯ ಮೇಲೆ ಬಂದು ಕೊಲೆ ಬೆದರಿಕೆ ಹಾಕಿದ್ದಾನೆ. ಆತನ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಐದು ದಿನ ಕಳೆದರೂ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿಲ್ಲ. ಇದು ಪ್ರಭಾರಿ ಗೃಹ ಸಚಿವರ ಕ್ಷೇತ್ರ. ಇಲ್ಲಿಯೇ ಈ ರೀತಿ ಗೂಂಡಾಗಿರಿ ನಡೆಯುತ್ತಿದೆ. ನಾನು ಸುಪ್ರೀಂ ಕೋರ್ಟ್ ವಕೀಲ ನನ್ನ ಗತಿಯೇ ಹೀಗಾದರೆ ಜನಸಾಮಾನ್ಯರ ಪಾಡು ಏನು?” ಎಂದು ತೀರ್ಥಹಳ್ಳಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ (Karnataka Election) ಸಾಲುರ್ ಶಿವಕುಮಾರ್ ಗೌಡ ಪ್ರಶ್ನೆ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೃಹ ಸಚಿವರು ಮುಂದಿನ ಐದು ವರ್ಷದಲ್ಲಿ ತೀರ್ಥಹಳ್ಳಿಯನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಹೇಳಿದ್ದಾರೆ. ಮಾದರಿ ಎಂದರೆ ಇದೇ ಏನು? ಈ ಘಟನೆ ಕುರಿತು ಇಲ್ಲಿಯವರೆಗೆ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಮಾತಾಡಿಲ್ಲ” ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Karnataka Election 2023: ಬಜರಂಗದಳ ಬಿಜೆಪಿಯದ್ದೇ ಸಂಘಟನೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪಕ್ಷದ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, “ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ನೀಡಿದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಕಾಪಿ ಮಾಡಿದೆ. ಇದು ನಮಗೆ ಖುಷಿಯ ವಿಚಾರ” ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಭಿಲಾಶ್ ಅಂದಿನಿ, ಸದಾನಂದ ಹೆಗಡೆ ಉಪಸ್ಥಿತರಿದ್ದರು.