ರಿಪ್ಪನ್‌ಪೇಟೆ: ಈ ಬಾರಿಯ ವಿಧಾನಸಭಾ ಚುನಾವಣೆಗೆ (Karnataka Election) ಚಂದನವನದ ನಟ ನಟಿಯರೂ ಸಾಥ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಸೇರಿ ಹಲವರು ಈಗಾಗಲೇ ಕೆಲ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಶಿವಮೊಗ್ಗದ ಸಾಗರದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಪ್ರಚಾರ ನಡೆಸಿದ್ದಾರೆ.
ಸೋಮವಾರ ರಿಪ್ಪನ್‌ಪೇಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ಶಿವರಾಜ್ ಕುಮಾರ್ ಅವರು ಬೇಳೂರು ಗೋಪಾಲಕೃಷ್ಣ ಅವರಿಗೆ ಮತ ನೀಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. “ಹುಟ್ಟು ಹೋರಾಟಗಾರ ರೈತ ಪರ ನಾಯಕ ಬಂಗಾರಪ್ಪಾಜಿಯವರ ಅಭಿಮಾನಿಗಳಿರುವ ಈ ಕ್ಷೇತ್ರದಲ್ಲಿ ಅವರೇ ಬೆಳಸಿದ ಹುಡುಗ ಗೋಪಾಲಕೃಷ್ಣ ಬೇಳೂರು. ಗೋಪಾಲಕೃಷ್ಣರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಜಯಗಳಿಸುವಂತೆ ಮಾಡಿ” ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಭಿಮಾನಿಗಳು ಜಯಘೋಷದ ಕೂಗು ಮುಗಿಲು ಮುಟ್ಟುವಂತಾಗಿ, “ಶಿವಣ್ಣ ಹಾಡು ಹೇಳಿ” ಎಂದು ಹಲವರು ಕೂಗಿದ್ದಾರೆ. ಅದಕ್ಕಾಗಿ ನಟ ಶಿವರಾಜ್ ಕುಮಾರ ʼಎಲ್ಲೋ ಜೋಗಪ್ಪ ನಿನ್ನ ಅರಮನೆʼ ಹಾಡನ್ನು ಹಾಡಿ ಅಭಿಮಾನಿಗಳನ್ನು ಹುರಿದುಂಬಿಸಿದರು.
ಈ ವೇಳೆ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧುಬಂಗಾರಪ್ಪ ಮಾತನಾಡಿ, “ಸೊರಬ, ಸಾಗರ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮತದಾರರು ನಮ್ಮ ತಂದೆಯವರ ಆಭಿಮಾನಿಗಳು. ಇದು ತವರೂರು ಆ ಕಾರಣದಿಂದಾಗಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನಮ್ಮಗಳ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ. ಈ ಬಾರಿ ಗೆಲುವು ನಮ್ಮದೇ ಎಂಬುದಕ್ಕೆ ಇಲ್ಲಿ ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ” ಎನ್ನುವುದರೊಂದಿಗೆ ಪರೋಕ್ಷವಾಗಿ ಬಿಜೆಪಿಗೆ ಈ ಜನಸ್ತೋಮವನ್ನು ಕಂಡು ಭಯಹುಟ್ಟುವಂತೆ ಮಾಡಿದೆ ಎಂದರು.
ಇದನ್ನೂ ಓದಿ: Karnataka Election: ಸಚಿವರಾಗಿ, ಸ್ಪೀಕರ್ ಆದವರು ಕ್ಷೇತ್ರಕ್ಕೆ ಏನನ್ನೂ ಕೊಟ್ಟಿಲ್ಲ: ಭೀಮಣ್ಣ ನಾಯ್ಕ ಕಿಡಿ
ಇದೇ ಸಂದರ್ಭದಲ್ಲಿ ಗವಟೂರು ಬಸ್ ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯ ಮೆರವಣಿಗೆ ಆರಂಭಗೊಂಡು ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯ ಮೆಸ್ಕಾಂ ಕಚೇರಿ ಬಳಿ ಕೊನೆಗೊಂಡಿತು.
ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್, ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತಾ, ಬಿ.ಜೆ. ನಾಗರಾಜ್, ಜಯಶೀಲಪ್ಪಗೌಡ, ಹಕ್ರೆ ಮಲ್ಲಿಕಾರ್ಜುನ, ಅಮ್ಮಿರ್ ಹಂಜಾ, ಎಚ್.ವಿ.ಈಶ್ವರಪ್ಪಗೌಡ, ಎಂ. ಎಂ.ಪರಮೇಶ್, ಏರಿಗಿ ಉಮೇಶ್, ಉಬೇದುಲ್ಲ ಷರೀಫ್, ಆಸಿಫ್ ಭಾಷಾ ಸಾಬ್, ಜಿ.ಆರ್.ಗೋಪಾಕೃಷ್ಣ, ಶ್ರೀಧರ್, ಮಳವಳ್ಳಿ ಮಂಜುನಾಥ, ಸಣ್ಣಕ್ಕಿ ಮಂಜ ಇದ್ದರು.