ಸಾಗರ : “ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ ಅಭ್ಯರ್ಥಿ (Karnataka Election ) ಹರತಾಳು ಹಾಲಪ್ಪ ಪರವಾಗಿ ನಿರಂತರ ಅಪಪ್ರಚಾರ ನಡೆಯುತ್ತಿದ್ದು, ಇದರ ವಿರುದ್ದ ಚುನಾವಣಾಧಿಕಾರಿಗಳು ಮೌನವಾಗಿರುವುದು ಖಂಡನೀಯ” ಎಂದು ಬಿಜೆಪಿ ಕಾನೂನು ವಿಭಾಗದ ಸಂಚಾಲಕ ಕೆ.ವಿ.ಪ್ರವೀಣ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೊಸನಗರ ಭಾಗದಲ್ಲಿ ಅಣ್ಣಪ್ಪ ಕೆ ಎಂಬುವವರು ಶಾಸಕ ಹಾಲಪ್ಪ ಅವರ ಸಹೋದರ ಮಾತನಾಡಿದ್ದಾರೆಂಬ ಆಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ” ಎಂದು ಹೇಳಿದರು.
“ಹಾಲಪ್ಪ ಅವರ ಸಹೋದರ ಮಾತನಾಡಿದ್ದಾರೆಂಬ ಎರಡು ಆಡಿಯೋ ಹೊಸನಗರ ಭಾಗದ ಗೌಡ ಸಮುದಾಯದ ವಲಯದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಜೊತೆಗೆ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹಾಲಪ್ಪ ಅವರ ಗೌರವಕ್ಕೆ ಧಕ್ಕೆ ಬರುವಂತೆ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಈ ಆಡಿಯೊ ಸಮುದಾಯಗಳ ನಡುವೆ ಕಂದಕ ಸೃಷ್ಟಿಸುತ್ತಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election : ಹೀಗೆ ಮಾತನಾಡಿಯೇ ಕಾಂಗ್ರೆಸ್‌ಗೆ ಈ ಗತಿ ಬಂದಿದ್ದು; ಮೋದಿ ಹಾವು ಹೇಳಿಕೆಗೆ ಬೊಮ್ಮಾಯಿ ಆಕ್ರೋಶ
“ಇದು ಒಂದು ರೀತಿಯ ಬ್ಲಾಕ್‍ಮೇಲ್ ತಂತ್ರವಾಗಿದ್ದು, ವಾಟ್ಸಪ್ ಗ್ರೂಪ್‍ಗಳಲ್ಲಿ ಮೆಸೇಜ್ ಹರಿದಾಡುತ್ತಿದ್ದರೂ ಚುನಾವಣಾಧಿಕಾರಿಗಳು, ಎಂಸಿಸಿ ತಂಡ ಮೌನವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಆಡಿಯೊ ಹರಿದು ಬಿಟ್ಟಿರುವವರ ಅನಾಮಧೇಯ ವ್ಯಕ್ತಿಯ ಕುರಿತು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತಿದ್ದು, ಆಡಿಯೊ ಎಲ್ಲಿಂದ ಬಂದಿದೆ, ಆಡಿಯೊ ಯಾರು ಮಾಡಿದ್ದು ಇನ್ನಿತರ ವಿಚಾರಗಳ ಬಗ್ಗೆ ಚುನಾವಣಾಧಿಕಾರಿಗಳು ತನಿಖೆ ನಡೆಸಬೇಕು. ಕಾಂಗ್ರೆಸ್‍ನವರು ಸೋಲಿನ ಭೀತಿಯಿಂದ ಇಂತಹ ಕೃತ್ಯ ನಡೆಸುತ್ತಿದ್ದಾರೆ” ಎಂದು ದೂರಿದರು.
ಗೋಷ್ಟಿಯಲ್ಲಿ ನಾಗರಾಜ ಪೈ, ಎಚ್.ಎಸ್.ರಮೇಶ್ ಹಾರಗೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ರಾಜೇಂದ್ರ ಪೈ, ಹು.ಭಾ.ಅಶೋಕ್ ಉಪಸ್ಥಿತರಿದ್ದರು.