ಸಾಗರ: “ನಾನು ವ್ಯವಹಾರದ ಉದ್ದೇಶಕ್ಕೆ ಆರೆಂಟು ತಿಂಗಳ ಹಿಂದೆ ಮಾಡಿರುವ ವಹಿವಾಟಿನ ವಿಡಿಯೊವನ್ನು ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ತೇಜೋವಧೆ ಮಾಡುವ ಜತೆಗೆ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರಿಗೆ ಹಿನ್ನಡೆ ಉಂಟು ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ವಿರೋಧಿಗಳ ಈ ನಡೆ ಯಶಸ್ವಿಯಾಗುವುದಿಲ್ಲ” ಎಂದು ನಗರಸಭೆ ಉಪಾಧ್ಯಕ್ಷ ವಿ. ಮಹೇಶ್ (Karnataka Election) ತಿಳಿಸಿದ್ದಾರೆ.
ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ವಹಿವಾಟಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು ನನ್ನ ತೇಜೋವಧೆಗೆ ಪ್ರಯತ್ನಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಸಾಗರದಲ್ಲಿ ಹಾಲಪ್ಪ ಅಭ್ಯರ್ಥಿತನಕ್ಕೆ ಹಿರಿಯ ಬಿಜೆಪಿ ಮುಖಂಡರಿಂದಲೇ ವಿರೋಧ; ಸೋಲಿಸುವ ಪಣ
“ನಾನು 20 ವರ್ಷಗಳಿಂದ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಂಕ್ರಿಟ್ ವಸ್ತು ತಯಾರಿಸಿ ಮಾರಾಟ ಮಾಡುವ ಘಟಕ ಹೊಂದಿದ್ದೇನೆ. ನಗರಸಭೆ ಸದಸ್ಯನಾಗಿ, ಹಾಲಿ ಉಪಾಧ್ಯಕ್ಷನಾಗಿ 20 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ತಾಲೂಕಿನ ಚೌಡಿಸರ ಗ್ರಾಮದ ಸ.ನಂ. 133/5ರ 3.38 ಎಕರೆ ಕೃಷಿ ಜಮೀನು ಅಭಿವೃದ್ಧಿ, ಸುತ್ತಲೂ ತಂತಿ ಬೇಲಿ, ಶೇಡ್‌ನೆಟ್, ಅಡಿಕೆ ಸಸಿ, ಬಾಳೆ ಸಸಿ, ತೆಂಗಿನ ಸಸಿ ಖರೀದಿಸಿ ನೆಡಲು ಬೇಕಾದ ಹಣವನ್ನು ಮಾಲೀಕರು ನನಗೆ ಕೊಟ್ಟಿದ್ದರು. ಹಣ ಕೊಟ್ಟ ಸಾಕ್ಷಿಗಾಗಿ ಅಂದು ವಿಡಿಯೊ ಮಾಡಲಾಗಿತ್ತು. ಅದನ್ನು ಚುನಾವಣೆ ಸಮಯದಲ್ಲಿ ಹರಿದು ಬಿಟ್ಟು ನನ್ನ ತೇಜೋವಧೆ ಮಾಡಲಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಜಮೀನು ಮಾಲೀಕ ಗಣಪತಿ ಕಾಶಿ, ವಿನಾಯಕ ಹಾಜರಿದ್ದರು.