Site icon Vistara News

Karnataka Rain: ಸೊರಬ ತಾಲೂಕಿನ ವಿವಿಧೆಡೆ ಮಳೆ ಆರ್ಭಟ; ವರದಾ ನದಿ ತೀರದ ವ್ಯಾಪ್ತಿಯ ಕೃಷಿ ಭೂಮಿ ಜಲಾವೃತ

Heavy rain in Chandragutti village and other places of Soraba taluk

ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಮ ಸೇರಿದಂತೆ ಹೋಬಳಿಯಾದ್ಯಂತ ಮಳೆಯ ಅರ್ಭಟ ಮುಂದುವರಿದಿದ್ದು, ವರದಾ ನದಿ ತೀರದ ಪ್ರದೇಶಗಳ ಹೊಲ, ಗದ್ದೆ, ತೋಟಗಳು ನೀರಿನಲ್ಲಿ (Karnataka Rain) ಮುಳುಗಡೆಯಾಗಿವೆ.

ತಾಲೂಕು ಹಾಗೂ ನೆರೆಯ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವರದಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಚಂದ್ರಗುತ್ತಿ ಸಮೀಪದ ಪುರಾ ಗ್ರಾಮದಲ್ಲಿ ಈಗಾಗಲೇ 5 ಕುಟುಂಬದ ಸುಮಾರು 30 ಜನ ನೆರೆಯ ಭೀತಿಯಿಂದ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದಂತೆ ನೆರೆ ಎದುರಾದರೆ 11 ಮನೆಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಗ್ರಾಮದ ಸರ್ಕಾರಿ ಕಿ.ಪ್ರಾ. ಶಾಲೆ ಅಥವಾ ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗಿದೆ. ವರದಾ ನದಿಯ ಪ್ರವಾಹಕ್ಕೆ ಈಗಾಗಲೇ ಕಡಸೂರು, ತಟ್ಟಿಕೆರೆ, ಅಂದವಳ್ಳಿ, ಜೋಳದಗುಡ್ಡೆ, ಚನ್ನಪಟ್ಟಣ ಹಾಗೂ ಅನೇಕ ಗ್ರಾಮಗಳ ನೂರಾರು ಎಕರೆ ಜಮೀನುಗಳು ಜಲಾವೃತವಾಗಿವೆ.

ಇದನ್ನೂ ಓದಿ: Karnataka Rain : ಗುಡ್ಡ ಕುಸಿತದಿಂದ ಅಂಕೋಲಾ ಹೆದ್ದಾರಿ ಬಂದ್‌; ಕೊಂಕಣ ರೈಲ್ವೆಯಿಂದ ರೈಲು ವ್ಯವಸ್ಥೆ

ಕಳೆದ 24 ಗಂಟೆಯಲ್ಲಿ ವಾಡಿಕೆ ಮಳೆಗಿಂತ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 28.4 ಮಿ.ಮೀ ಆಗಿದ್ದು, 121.2 ಮಿ.ಮೀ ಮಳೆ ದಾಖಲಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ಕೋಡಿ ಬಿದ್ದಿವೆ. ಕಮರೂರು ಗ್ರಾಮದಲ್ಲಿ ಕೆರೆ ನೀರು ರಸ್ತೆಗೆ ಬರುತ್ತಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಈ ಹಿಂದೆ ಸಮರ್ಪಕವಾಗಿ ಕೆರೆ ಕೋಡಿ ದುರಸ್ತಿ ಮಾಡದಿರುವುದೇ ಸಮಸ್ಯೆಗೆ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಚಂದ್ರಗುತ್ತಿಯಿಂದ ಉತ್ತರ ಕನ್ನಡದ ಸಿದ್ದಾಪುರ ರಸ್ತೆಯ ಶಿವಪುರ ಸಮೀಪ ಭಂಗೀ ಭೂತಪ್ಪ ದೇವಸ್ಥಾನದ ಬಳಿ ಹಳ್ಳ ಉಕ್ಕಿದ್ದು, ಸುತ್ತಲಿನ ಪ್ರದೇಶ ಜಲಾವೃತವಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಚಂದ್ರಗುತ್ತಿ-ಸಿದ್ದಾಪುರ ರಸ್ತೆ, ನ್ಯಾರ್ಸಿ ಸಮೀಪ ಹಳ್ಳ ಉಕ್ಕಿದರೆ ಹರೀಶಿ ಸಂಪರ್ಕ ರಸ್ತೆ, ಗುಂಜನೂರು ನರ್ಸರಿ ಬಳಿ ವರದಾ ನದಿ ಉಕ್ಕಿ ನೀರು ರಸ್ತೆಗೆ ಬಂದರೆ ಸೊರಬ ಸಂಪರ್ಕ ರಸ್ತೆ ಕಡಿತವಾಗುವ ಸಾಧ್ಯತೆ ಎದುರಾಗಿದೆ.

ಇದನ್ನೂ ಓದಿ: Shivamogga News: ಹುಲಗಾರು–ಮೈತಳ್ಳಿ ಸಂಪರ್ಕ ರಸ್ತೆಯಲ್ಲಿ ದರೆ ಕುಸಿತ; ಡಿಸಿ ಭೇಟಿ, ಪರಿಶೀಲನೆ

ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಜನತೆಯ ಸುರಕ್ಷತೆ ದೃಷ್ಟಿಯಿಂದ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗಿದೆ. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ನೆರೆಯಿಂದ ಸಮಸ್ಯೆ ಎದುರಾದರೆ ಅಂತಹ ಸ್ಥಳದಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡಿ ಸ್ಥಳೀಯ ಸರ್ಕಾರಿ ಶಾಲೆ ಅಥವಾ ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತದಿಂದ ಸಿದ್ದತೆ ನಡೆದಿದೆ ಎಂದು ಉಪ ತಹಸೀಲ್ದಾರ್‌ ಪಿ.ಲಲಿತಾ ತಿಳಿಸಿದ್ದಾರೆ.

Exit mobile version