Site icon Vistara News

Karnataka Weather: ಭಾರೀ ಗಾಳಿ ಮಳೆಗೆ ಧರೆಗುರುಳಿದ ಬೃಹತ್‌ ಮರ, ವಿದ್ಯುತ್‌ ಕಂಬ

heavy wind and rain damaged tree and electricity poles In Jholada Gudde village

ಸೊರಬ: ಬಿರುಗಾಳಿ ಸಮೇತ ಸುರಿದ ಮಳೆಗೆ (Karnataka Weather) ವಿದ್ಯುತ್ ಕಂಬಗಳು ಹಾಗೂ ಬೃಹತ್‌ ಮರವೊಂದು ಧರೆಗುರುಳಿದ ಘಟನೆ ಚಂದ್ರಗುತ್ತಿ ಸಮೀಪದ ಜೋಳದ ಗುಡ್ಡೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ಜರುಗಿದೆ. ಮಧ್ಯಾಹ್ನದ ವರೆಗೆ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ನಂತರ ಮೋಡ ಕವಿದು ಬಿರುಗಾಳಿ ಸಮೇತ ಮಳೆ ಸುರಿದಿದೆ.

ಗಾಳಿ-ಮಳೆಗೆ ಜೋಳದ ಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿ ರಸ್ತೆಗೆ ಅಡ್ಡಲಾಗಿ ಧರೆಗೆ ಉರುಳಿದ ಪರಿಣಾಮ ಸುಮಾರು ಮೂರು ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ಕೆಲ ಸಮಯ ಸೊರಬ ಚಂದ್ರಗುತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಯಿತು.

ಇದನ್ನೂ ಓದಿ: Uttara Kannada News: ಬದುಕಿನ ಪುರುಷಾರ್ಥಗಳ ಸಾಧನೆಗೆ ರಾಮಾಯಣ ಸಾಧನ; ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

ವಿಷಯ ತಿಳಿದು ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗ್ರಾಪಂ ಸದಸ್ಯ ಲೋಕೇಶ್ ಸೇರಿದಂತೆ ಇತರರು ಅಧಿಕಾರಿಗಳಿಗೆ ಸಹಕಾರ ನೀಡಿದರು.

ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದ ಇಳೆಗೆ ಮಳೆ ತಂಪೆರೆಚಿದಂತಾಗಿದೆ.

Karnataka weather: ಸಿಡಿಲಿಗೆ ಸಿದ್ದಾಪುರದ ವ್ಯಕ್ತಿ ಬಲಿ; ಇನ್ನೂ ನಾಲ್ಕು ದಿನ ಇದೆ ಭಾರಿ ಮಳೆ ಎಚ್ಚರಿಕೆ!

ಬೆಂಗಳೂರು: ರಾಜ್ಯಾದ್ಯಂತ ಮಳೆಯಾರ್ಭಟ ಜೋರಾಗಿದೆ. ಗುಡುಗು – ಸಿಡಿಲಿನಿಂದ ಕೂಡಿದ ಮಳೆಯಾಗುತ್ತಿದೆ. ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನು ಮೇ 18ರ ವರೆಗೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Karnataka weather Forecast) ಹವಾಮಾನ ಇಲಾಖೆ ನೀಡಿದೆ.

ಸಿದ್ದಾಪುರ ಗ್ರಾಮದ ಸುರೇಶ್‌ ಶೆಟ್ಟಿ (38) ಮೃತ ದುರ್ದೈವಿ. ಇಂದು ಸಂಜೆ ಹೊತ್ತಿಗೆ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಈ ವೇಳೆ ಸುರೇಶ್‌ ಶೆಟ್ಟಿ ಅವರಿಗೆ ಸಿಡಿಲು ಬಡಿದಿದ್ದು, ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಗಾಳಿ ಸಹಿತ ಭಾರಿ (Heavy Rain) ಮಳೆಯಾಗಿದೆ. ಮಂಗಳವಾರ ಸಂಜೆ ಶುರುವಾದ ಮಳೆಯು ಕಳೆದ ಒಂದು ಗಂಟೆಗೂ ಹೆಚ್ಚು ಸಮಯ ಸುರಿದಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಧಾರಾಕಾರ ಮಳೆ‌ಯಾಗಿದ್ದು, ಪ್ರವಾಸಿಗರು ಹಾಗೂ ಜನ-ಜೀವನ ಅಸ್ತವ್ಯಸ್ತವಾಗಿದೆ. ಬಲವಾದ ಗಾಳಿ – ಮಳೆಗೆ ಶೃಂಗೇರಿ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸತತ ಮಳೆಯಿಂದಾಗಿ (Rain News) ತುಂಗಾ ನದಿಯ ಹರಿವು ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ. ಧಾರವಾಡದಲ್ಲಿಯೂ ಭಾರಿ ಮಳೆಯಾಗಿದೆ.

ಉತ್ತರ ಕನ್ನಡದಲ್ಲೂ ವರುಣಾರ್ಭಟ

ಉತ್ತರ ಕನ್ನಡದ ಘಟ್ಟದ ಮೇಲಿನ ತಾಲೂಕುಗಳಲ್ಲೂ ವರುಣಾರ್ಭಟ ಜೋರಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲೂ ಭಾರಿ ಗಾಳಿ ಸಹಿತ ಮಳೆಯಾಗಿದೆ. ಶಿರಸಿಯಲ್ಲಿ ಭಾರಿ ಮಳೆಗೆ ಮರಗಳು ಧರೆಗುರುಳಿವೆ. ನಗರದ ಸಹ್ಯಾದ್ರಿ ಕಾಲೋನಿಯಲ್ಲಿ ಮರ ಬಿದ್ದು, ವಿದ್ಯುತ್ ಕಂಬ ಮುರಿದು ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Victoria Hospital: ವಿಕ್ಟೋರಿಯಾ ಆಸ್ಪತ್ರೆಯಿಂದ ವಜಾಗೊಂಡಿದ್ದ 55 ಸಿಬ್ಬಂದಿ ಮರು ನೇಮಕ

ಕುಮಟಾ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಅರ್ಧ ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯಾದರೂ ಕರಾವಳಿಗೆ ವರುಣ ಕಾಲಿಟ್ಟಿರಲಿಲ್ಲ. ಇದೀಗ ವರುಣಾಗಮನದಿಂದ ಕರಾವಳಿ ಜನತೆ ಖುಷಿಯಾಗಿದ್ದಾರೆ. ಭಟ್ಕಳ, ಹೊನ್ನಾವರ, ಅಂಕೋಲಾ, ಕಾರವಾರ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.

ಧಾರವಾಡದಲ್ಲಿ ಮಳೆಯ ಅಬ್ಬರ

ಧಾರವಾಡದಲ್ಲಿ ಮಂಗಳವಾರ ಬೆಳಗ್ಗೆಯಿಂದಲ್ಲೂ ಮೋಡ ಕವಿದ ವಾತಾವರಣವಿತ್ತು. ಇಳಿ ಸಂಜೆಯಾಗುತ್ತಿದ್ದಂತೆ ಧಾರವಾಡ ನಗರಕ್ಕೆ ವರುಣನ ಆಗಮನವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುರಿದಿದ್ದ ಮಳೆಯು ಸ್ವಲ್ಪ ಸಮಯ ಬ್ರೇಕ್‌ ಕೊಟ್ಟಿತ್ತು. ಇಂದು ಮತ್ತೆ ಮಳೆ ಸುರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಮೇ 18ರ ವರೆಗೆ ಮಳೆ ಸಾಧ್ಯತೆ
ಮೇ 18ರ ವರೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ.

ಕೊಡಗು, ಮೈಸೂರು, ಮಂಡ್ಯದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿಮೀ)ಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡ, ಧಾರವಾಡ, ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Viral News: ಗಾಜಾದಲ್ಲಿ ಆಹಾರ ಸಿಗದೆ ನಾಣ್ಯ, ಕಲ್ಲು, ಬ್ಯಾಟರಿ ತಿನ್ನುತ್ತಿರುವ ಮಕ್ಕಳು!

ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆ

ನಿನ್ನೆ ಸೋಮವಾರ (ಮೇ 13) ರಾಜ್ಯಾದ್ಯಂತ ಮಳೆಯಾಗಿದ್ದು, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆಯಾಗಿದ್ದು, ಮಂಡ್ಯದ ಪಿಟಿಒನಲ್ಲಿ 9 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಶಿರಾಳಿಯಲ್ಲಿ ಗರಿಷ್ಠ ಉಷ್ಣಾಂಶ 38.4 ಡಿ.ಸೆನಷ್ಟು ದಾಖಲಾಗಿದೆ.

Exit mobile version