ಹೊಸನಗರ: ಲೈಂಗಿಕ ಪ್ರಕರಣಗಳಲ್ಲಿ ರಾಜ್ಯದಲ್ಲಿ ಶಿವಮೊಗ್ಗ (Shivamogga) ಜಿಲ್ಲೆ 2ನೇ ಸ್ಥಾನದಲ್ಲಿದ್ದು, ನಾವು ಕೊನೆಯ ಸ್ಥಾನಕ್ಕೆ ಹೋಗಬೇಕಾದರೆ ಶಾಲೆಯಲ್ಲಿ (School) ಶಿಕ್ಷಕರ ವೃಂದ, ಕಾಲೇಜುಗಳಲ್ಲಿ (College) ಉಪನ್ಯಾಸಕ ವೃಂದ ಹಾಗೂ ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಲೈಂಗಿಕ ಪ್ರಕರಣಗಳನ್ನು ತಡೆ ಹಿಡಿಯಬಹುದು ಎಂದು ಹೊಸನಗರದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ಕೆ. ಹೇಳಿದರು.
ಪಟ್ಚಣದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಕಾರಣ ಯಾವುದೇ ಮಕ್ಕಳಾಗಲಿ, ಪೋಷಕರಾಗಲಿ, ಇನ್ನಿತರ ಅಧಿಕಾರಿಗಳಾಗಲಿ ಯಾವುದೇ ಹಿಂಜರಿಕೆ ಭಯ ಇಲ್ಲದೇ ಲೈಂಗಿಕ ದೌರ್ಜನ್ಯ ವಿರುದ್ಧ ದೂರು ನೀಡಬಹುದು, ದೂರು ನೀಡುವುದರಿಂದ ಲೈಂಗಿಕ ದೌರ್ಜನ್ಯ ತಡೆಯಬಹುದು ಎಂದರು.
ಇದನ್ನೂ ಓದಿ: Virat Kohli: ರಜೆಯಲ್ಲಿದ್ದರೂ ಓಟ ಮಾತ್ರ ನಿರಂತರ; ಕೊಹ್ಲಿಯ ಈ ಮಾತಿನ ರಹಸ್ಯವೇನು?
ಲೈಂಗಿಕ ಪ್ರಕರಣಗಳು ಅಪರಿಚಿತರಿಂದಲೇ ಆಗುತ್ತದೆ ಎಂದು ತಿಳಿಯುವುದು ತಪ್ಪು ಗ್ರಹಿಕೆ. ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಪ್ರಕರಣಗಳು ಪೋಷಕರಿಂದ ನೆರೆ-ಹೊರೆಯವರಿಂದ, ಶಿಕ್ಷಕರಿಂದ ಮತ್ತು ಸಂಬಂಧಿಕರಿಂದಲೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಮುಚ್ಚು-ಮರೆ ಇಲ್ಲದೇ ಸಂತ್ರಸ್ಥರು ತಮ್ಮ ದೂರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ನೀಡಿದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ನೀಡುವಲ್ಲಿ ನ್ಯಾಯಾಲಯ ದೊಡ್ಡ ಪಾತ್ರ ವಹಿಸುತ್ತದೆ ಹಾಗೂ ಸಂತ್ರಸ್ಥರಿಗೆ ಪರಿಹಾರ ನೀಡಲಿದೆ ಎಂದರು.
ಸಮಾಜದ ಅಭಿವೃದ್ಧಿಗೆ ಹಲವು ಕಾನೂನುಗಳನ್ನು ನಮ್ಮ ಸಂವಿಧಾನ ರಚಿಸಿದೆ ಆದರೆ ಇಂದಿಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತದೆ. ಹಲವಾರು ಸಮಸ್ಯೆಗಳು ಈಗಲೂ ನಮ್ಮ ಮುಂದೆ ಇದೆ, ಸಮಾನತೆ ಬಂದಿದ್ದರೂ ಸಹ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ, ಆದ್ದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೂ ತಕ್ಷಣ ಯಾವುದೇ ಹಿಂಜರಿಕೆ ತೋರಿಸದೆ ನ್ಯಾಯಾಕ್ಕಾಗಿ ಪ್ರಕರಣ ದಾಖಲಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲ ಕರ್ಣಕುಮಾರ್ ಮಾತನಾಡಿದರು. ಹೊಸನಗರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸುಮಂಗಳ, ಪೋಕ್ಸೋ ಕಾಯ್ದೆಯ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸ್ವಾಮಿರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Minimum Wages: ಗ್ರಾಪಂ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಸೀಮಾ ನಿರೂಪಿಸಿದರು.