ರಿಪ್ಪನ್‌ಪೇಟೆ: ಮೇ 7ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ-ಜೆಡಿಎಸ್ ಬೆಂಬಲಿತ ಆಭ್ಯರ್ಥಿ ಬಿ.ವೈ. ರಾಘವೇಂದ್ರ, ಈ ಬಾರಿ ಅತಿ ಹೆಚ್ಚು ಮತಗಳ ಆಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ವಿಶ್ವಾಸ ವ್ಯಕ್ತಪಡಿಸಿದರು.
ರಿಪ್ಪನ್‌ಪೇಟೆಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಎರಡು ಪಕ್ಷದ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಫರ್ಧಿಸಿದರೂ ಬಿ.ವೈ.ರಾಘವೇಂದ್ರರ ಗೆಲುವು ತಡೆಯಲು ಸಾಧ್ಯವಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಬಹಳಷ್ಟು ಆಭಿವೃದ್ದಿ ಕಾರ್ಯಗಳನ್ನು ಬಿ.ವೈ. ರಾಘವೇಂದ್ರ ಅವರು ಕೇಂದ್ರದ ಸಚಿವರಾಗಿ ಈಡೇರಿಸುತ್ತಾರೆ.
ಇದನ್ನೂ ಓದಿ: TCS World 10K : ನಾಳೆ ಬೆಂಗಳೂರಿನಲ್ಲಿ ವಿಶ್ವ ವಿಖ್ಯಾತಿಯ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಾಥಾನ್
ದೇಶಕ್ಕೆ ಬೆಳಕು ನೀಡುವ ಉದ್ದೇಶದಿಂದ ಮನೆ-ಮಠವನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಶರಾವತಿ ಸಂತ್ರಸ್ಥ ಕುಟುಂಬಕ್ಕೆ ಶಾಶ್ವತ ನೆಲೆ ಕಾಣುವಂತೆ ಮಾಡುವ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಸಾಕಷ್ಟು ಬಾರಿ ಗಮನ ಸೆಳೆದಿರುವ ಬಿ.ವೈ.ರಾಘವೇಂದ್ರ, ಈ ಬಾರಿ ಗೆದ್ದು ಆ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದರು.
ಕಳೆದ ಹತ್ತು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಆಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತವರು ಕ್ಷೇತ್ರದ ಕಡೇ ಮುಖ ಹಾಕಲೇ ಇಲ್ಲ ಎಂದು ಆರೋಪಿಸಿದ ಅವರು,. ಇದೀಗ ದಿಢೀರ್ ಅಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಪ್ರತ್ಯಕ್ಷರಾಗಿದ್ದಾರೆ. ಇವರಿಗೆ ಮತ ಹಾಕಿ ಗೆಲ್ಲಿಸಬೇಕೇ? ಜಿಲ್ಲೆಯ ಹತ್ತು ಹಲವು ಸಮಸ್ಯೆಗಳ ಅರಿವೇ ಇಲ್ಲದವರನ್ನು ಬೆಂಬಲಿಸಬೇಕಾ ಎಂದರು.
ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಕೇವಲ 10 ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂಬುದಕ್ಕೆ ಮೈಸೂರು-ಬೆಂಗಳೂರು, ಶಿವಮೊಗ್ಗ-ಸಾಗರ-ತಾಳಗುಪ್ಪ ಇಂಟರ್ ಸಿಟಿ ರೈಲು ಸೇರಿದಂತೆ ವಿಮಾನ ನಿಲ್ದಾಣ, ಮೇಗರವಳ್ಳಿಯಿಂದ ಆಗುಂಬೆ ಮಾರ್ಗದ ಸೋಮೇಶ್ವರದವರೆಗೆ ಸುರಂಗ ಮಾರ್ಗದ ಸಂಪರ್ಕದ ರಸ್ತೆ ಅಭಿವೃದ್ಧಿ ಹಾಗೂ ರಾಣೆಬೆನ್ನೂರು-ಬೈಂದೂರುವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕೋಟ್ಯಾಂತರ ರೂ. ಅನುದಾನ ತರಲಾಗಿದ್ದರೂ ಕಾಂಗ್ರೆಸ್ ಪಕ್ಷದವರು ಏನು ಮಾಡಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮತದಾರರು ಕಿವಿಗೊಡಬೇಡಿ ಎಂದ ಅವರು, ನಮ್ಮ ಎರಡು ಪಕ್ಷದವರು ಮತದಾರರಿಗೆ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಸಾಧನೆಗಳನ್ನು ಮನವರಿಕೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ: MDH, Everest Spices: ಎವರೆಸ್ಟ್, ಎಂಡಿಎಚ್ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ
ಈ ವೇಳೆ ಹೊಸನಗರ ತಾಲೂಕು ಜೆಡಿಎಸ್ ಆಧ್ಯಕ್ಷ ಎನ್.ವರ್ತೇಶ್, ಬಿಜೆಪಿ ಜಿಲ್ಲಾ ಮುಖಂಡ ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ನಾಗಾರ್ಜುನಸ್ವಾಮಿ, ಕೃಷ್ಣೋಜಿರಾವ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಜಿ.ಎಸ್.ವರದರಾಜ್, ಬಿಜೆಪಿ ಮುಖಂಡರಾದ ಸುಂದರೇಶ್, ಸುಧೀಂದ್ರ ಪೂಜಾರಿ, ಪಿ.ರಮೇಶ್, ಮಹೇಶ ಮಾಣಿಕೆರೆ, ಮಂಜುನಾಥ ಗವಟೂರು, ರಾಮು ಬಳೆಗಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.