ಶಿವಮೊಗ್ಗ: ಜಿಲ್ಲೆಯನ್ನು ಡೆಂಘೆ ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವಲ್ಲಿ ಜಿಲ್ಲೆಯ ನಾಗರಿಕರು ಸಹಕಾರ ನೀಡುವುದರ ಜತೆಗೆ ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಡೆಂಘೆ ಕಾಯಿಲೆ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಿಂದ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೊಳ್ಳೆಗಳಿಂದ ಡೆಂಘೆ ಸೇರಿ ಅನೇಕ ಕಾಯಿಲೆಗಳು ಹರಡಬಹುದಾದ ಸಾಧ್ಯತೆ ಇದೆ. ಅವುಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸುವಂತೆ ಕರೆ ನೀಡಿದರು.
2015ರಲ್ಲಿ ಆರಂಭ ಹಂತದಲ್ಲಿದ್ದ ಡೆಂಘೆ ಸೋಂಕು ಪ್ರತಿ ವರ್ಷವೂ ಹೆಚ್ಚಾಗುತ್ತಲೆ ಇದೆ. ಕಳೆದ ಸಾಲಿನಲ್ಲಿ 503 ಮಂದಿಗೆ ಹಾಗೂ ಪ್ರಸಕ್ತ ಸಾಲಿನ ಆರಂಭಿಕ ಮಾಹೆಗಳಲ್ಲಿ 46 ಮಂದಿ ಸೋಂಕಿತರಾಗಿದ್ದಾರೆ. ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಈ ಸೋಂಕಿನಿಂದ ಈವರೆಗೆ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 40 ಕೋಟಿ ಡೆಂಘೆ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ 80% ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಯಲ್ಲಿ ಯಾವುದೇ ಗುಣಲಕ್ಷಣಗಳು ಗೋಚರಿಸದಿರುವುದು ಸವಾಲಾಗಿ ಪರಿಣಮಿಸಿದೆ ಎಂದರು.
ಜಾಗೃತಿ ಜಾಥಾವು ಡಿಎಚ್‌ಒ ಕಚೇರಿ ಆವರಣದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಭಾರತೀಯ ಮೆಡಿಕಲ್ ಅಸೋಸಿಯೇಶ್‍ನಲ್ಲಿ ಸಂಪನ್ನಗೊಂಡಿತು. ಡಾ. ಗುಡದಪ್ಪ ಕುಸಬಿ, ಡಾ.ಜಿ.ಬಿ ಚಂದ್ರಶೇಖರ, ಪ್ರತಿಮಾ, ಡಾ.ದಿನೇಶ್, ವಿಜಯಕುಮಾರ್, ಸುಬ್ಬಯ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಪಾಲ್ಗೊಂಡರು.
ಇದನ್ನೂ ಓದಿ| ಇಂದು ರಾಷ್ಟ್ರೀಯ ಡೆಂಗ್ಯೂ ದಿನ: ರಾಜಧಾನಿಯಲ್ಲಿ ಹೆಚ್ಚುತ್ತಿದೆ ಪ್ರಕರಣ