ಸೊರಬ: ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ (ಡಿ.೧೦) ಪಟ್ಟಣದಲ್ಲಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರನ್ನು ಭೇಟಿಯಾಗಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದುಪಡಿಸಿ (Protest against NPS), ಒಪಿಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಪ್ರೊ.ಎಂ.ಎಚ್. ರಾಜಪ್ಪ ಮಾತನಾಡಿ, ಎನ್‌ಪಿಎಸ್ ಯೋಜನೆ ನೌಕರರಿಗೆ ಮರಣ ಶಾಸನವಾಗಿದೆ. ಸರ್ಕಾರ ನೌಕರರಿಗೆ ಹಳೆಯ ಮಾದರಿಯ ಪಿಂಚಣಿಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇದರಿಂದ ನೌಕರರ ಅವಲಂಬಿತ ಕುಟುಂಬಸ್ಥರಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, “ಎನ್‌ಪಿಎಸ್ ನೌಕರರ ಪರವಾಗಿ ಧ್ವನಿ ಎತ್ತಲು ಸಿದ್ಧನಾಗಿದ್ದೇನೆ. ಸರ್ಕಾರವೂ ಸಹ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಾ ಹಿತ ಕಾಯುತ್ತಿದೆ. ಮುಂಬರುವ ಚಳಿಗಾಗಲದ ಅಧಿವೇಶನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಹಳೆಯ ಪಿಂಚಣಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ತಿಳಿಸಿದರು.
ಇದಕ್ಕೂ ಮೊದಲು ನೌಕರರು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯ ರಸ್ತೆ ಮಾರ್ಗವಾಗಿ ಪಾದಯಾತ್ರೆ ನಡೆಸಿ, ಖಾಸಗಿ ಬಸ್ ನಿಲ್ದಾಣದ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ “ಎನ್‌ಪಿಎಸ್ ಹಠಾವೋ, ನೌಕರರ ಬಚಾವೋ” ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಶಿವಕುಮಾರ್, ಜಿಲ್ಲಾ ನಿರ್ದೇಶಕ ಪ್ರಕಾಶ್ ಮಡ್ಲೂರ್, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ, ಎನ್‌ಪಿಎಸ್ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಲೇಶ್, ನೌಕರರಾದ ಭೀಮಪ್ಪ, ಎನ್. ಗಣೇಶ್, ದೀಪಕ್ ದೋಂಗಡೇಕರ್, ವೈ.ಎಸ್. ದೀಪಕ್, ಓಂಕಾರಪ್ಪ, ಪರಶುರಾಮ್, ಸಂದೀಪ್, ಅಂಜನೇಶ್, ಚಂದ್ಯಾನಾಯಕ, ಎಂ.ಕೆ. ಮಂಜುನಾಥ್, ಶಮೀಮ್ ತಾಜ್, ಗುರುರಾಜ್, ಯಶೋಧ, ಜಯಲಕ್ಷ್ಮೀ , ಶಶಿಕಲಾ, ಜಯಣ್ಣ, ವೀರೇಶ್ ಹಾಜರಿದ್ದರು.
ಇದನ್ನೂ ಓದಿ | Shivrajkumar | ಇಂದು ಮಂಗಳೂರಿನಲ್ಲಿ ವೇದ ಪ್ರಿ ರಿಲೀಸ್ ಇವೆಂಟ್: ಕೊರಗಜ್ಜ ಸನ್ನಿಧಿಗೆ ನಟ ಶಿವರಾಜ್‌ಕುಮಾರ್ ಭೇಟಿ