ರಿಪ್ಪನ್‌ಪೇಟೆ: ಕಳೆದ ಒಂದೂವರೆ ತಿಂಗಳ ಹಿಂದೆ ಎರಡು ಬೈಕ್‌ಗಳ (Bikes) ನಡುವೆ ಮುಖಾಮುಖಿ ಡಿಕ್ಕಿಯಾಗಿ (Head-On Collision) ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ನಡೆದಿದೆ.
ಪಟ್ಟಣ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಶ್ರೀನಾಥ್ (33) ಮೃತ ವ್ಯಕ್ತಿ. ಕಳೆದ ಡಿಸೆಂಬರ್ 2 ರಂದು ಕೊಳವಂಕ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಮೃತ ಶ್ರೀನಾಥ್ ಅವರ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಾಯವಾಗಿತ್ತು. ಸ್ಥಳೀಯರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: boat capsizes: ಬೋಟ್ ಮುಗುಚಿ 6 ಶಾಲಾ ಮಕ್ಕಳ ದುರ್ಮರಣ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ನಂತರ ಶ್ರೀನಾಥ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಸುಮಾರು 20 ದಿನಗಳ ನಂತರ ಆರೋಗ್ಯದಲ್ಲಿ ಏರುಪೇರಾಗಿ ಆಗಾಗ್ಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಜ.5 ರಂದು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದ್ದರಿಂದ ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಶ್ರೀನಾಥ್ ಮೃತಪಟ್ಟಿದ್ದಾರೆ.
ಮೃತರು ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದು ಪತ್ನಿ, 9 ತಿಂಗಳ ಪುತ್ರ, ತಾಯಿ ಮತ್ತು ಸಹೋದರಿ, ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗುರುವಾರ ಮಧ್ಯಾಹ್ನದ ಸ್ವಗ್ರಾಮ ಬಸವಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ಇದನ್ನೂ ಓದಿ: ಸುಮಿತ್ ನಾಗಲ್, ರೈಬಾಕಿನಾಗೆ ಆಘಾತಕಾರಿ ಸೋಲು; ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟ ಬೋಪಣ್ಣ ಜೋಡಿ
ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.