ಸಾಗರ: “ಎಲ್ಲ ವೈದ್ಯರು ಪರಸ್ಪರ ಸಹಮತದಿಂದ ಇರಬೇಕು. ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.
ಶಾಸಕರು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವೈದ್ಯ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಆಸ್ಪತ್ರೆಗೆ ಬೇಕಾದ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು. “ಆಸ್ಪತ್ರೆಯಲ್ಲಿ ಕೇವಲ ಐದು ಡಯಾಲಿಸಿಸ್ ಯಂತ್ರಗಳು ಮಾತ್ರವೇ ಕೆಲಸ ಮಾಡುತ್ತಿವೆ. ಇದರಿಂದಾಗಿ ಡಯಾಲಿಸಿಸ್‍ಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳಿಂದ ಹೆಚ್ಚುವರಿಯಾಗಿ ಮೂರು ಡಯಾಲಿಸಿಸ್ ಯಂತ್ರಗಳನ್ನು ಕೊಡಿಸಲಾಗುತ್ತದೆ. ಹೆಚ್ಚುವರಿಯಾಗಿ ಡಯಾಲಿಸಿಸ್ ಯಂತ್ರಗಳು ಸೇರಿದಂತೆ ಆಸ್ಪತ್ರೆಗೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಲಾಗುತ್ತದೆ” ಎಂದು ಶಾಸಕರು ತಿಳಿಸಿದ್ದಾರೆ.
ಇದನ್ನೂ ಓದಿ: Rain News: ಶಿವಮೊಗ್ಗದಲ್ಲಿ ಸಿಡಿಲು ಬಡಿದು ಮಹಿಳೆ ಸಾವು
ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದ ಅವರು, “ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದೂ ಇಲ್ಲದಂತೆ ಆಗಿದೆ. ರೋಗಿಗಳು ಆಯುಷ್ಮಾನ್ ಕಾರ್ಡ್ ತೆಗೆದುಕೊಂಡು ಚಿಕಿತ್ಸೆಗೆ ಹೋದರೆ ಖಾಸಗಿ ಆಸ್ಪತ್ರೆಯವರು ಅದನ್ನು ತಿರಸ್ಕರಿಸುತ್ತಿದ್ದಾರೆ. ಈ ಕಾರ್ಡ್ ಪ್ರಯೋಜನಕ್ಕೆ ಬರುವುದಿಲ್ಲ, ಹಣ ಕಟ್ಟಿ ಎಂದು ಹೇಳುತ್ತಿದ್ದಾರೆ. ಈ ಸೌಭಾಗ್ಯಕ್ಕೆ ಆಯುಷ್ಮಾನ್ ಕಾರ್ಡ್ ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, “ಜನೌಷಧಿ ಮಳಿಗೆಯಲ್ಲಿ ಯಾವುದೇ ಔಷಧಿ ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಸರ್ಕಾರ ಜನೌಷಧ ಕೇಂದ್ರಗಳಿಗೆ ತಕ್ಷಣ ಔಷಧಿ ಪೂರೈಕೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಹೊರಗಿನ ಔಷಧಿಯನ್ನು ಬರೆದುಕೊಡದೆ ಆಸ್ಪತ್ರೆಯಲ್ಲಿಯೇ ಮಾತ್ರೆ, ಔಷಧಿಯನ್ನು ಪೂರೈಕೆ ಮಾಡಬೇಕು” ಎಂದು ತಾಕೀತು ಮಾಡಿದರು.
ಹಾಗೆಯೇ ಗೋಪಾಲಕೃಷ್ಣ ಅವರು ಮಂಗಳವಾರ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಮಾತನಾಡಿದ ಅವರು, “ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಹಸಿರುಮಕ್ಕಿ ಸೇತುವೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಇದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ತರಲಾಗುತ್ತದೆ” ಎಂದು ಮಾಹಿತಿ ನೀಡಿದರು.
“ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಹಾಗಾಗಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿ ಉಳಿದ ಹಣ ಬಿಡುಗಡೆ ಮಾಡಿಸುತ್ತೇನೆ. ಕಾಗೋಡು ತಿಮ್ಮಪ್ಪ ಅವರು ಈ ಭಾಗದ ಜನರ ಸಮಸ್ಯೆಯನ್ನು ಮನಗಂಡು ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಹಿಂದಿನ ಶಾಸಕರು ತಮ್ಮದೆ ಸರ್ಕಾರವಿದ್ದು, ಸಂಸದರು, ಸಚಿವರಿದ್ದರೂ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಆಸಕ್ತಿ ತೋರಿಸಲಿಲ್ಲ. ಚುನಾವಣೆಗೆ ಮೂರು ತಿಂಗಳು ಇರುವಾಗ, ನಾವು ಪಾದಯಾತ್ರೆ ನಡೆಸಿದ ನಂತರ ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿದ್ದರು” ಎಂದು ದೂರಿದರು.
ಇದನ್ನೂ ಓದಿ: Organ Donation: ಮನೆ ಮಹಡಿಯಿಂದ ಆಯತಪ್ಪಿ ಬಿದ್ದ ಬಾಲಕಿಯ ಮೆದುಳು ನಿಷ್ಕ್ರಿಯ; ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು
“ಸೇತುವೆ ನಿರ್ಮಾಣಕ್ಕೆ 115 ಕೋಟಿ ರೂ. ಬೇಕೆಂದು ಅಂದಾಜಿಸಲಾಗಿದೆ. ಸೇತುವೆಯ ಶೇ.50ರಷ್ಟು ಕೆಲಸ ಮುಗಿದಿದೆ. ಈವರೆಗೆ ಸುಮಾರು 55 ಕೋಟಿ ರೂ. ಖರ್ಚಾಗಿದೆ ಎನ್ನಲಾಗುತ್ತಿದೆ. ಉಳಿದ ಹಣವನ್ನು ಬಿಡುಗಡೆ ಮಾಡುವ ಕೆಲಸ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಕೆಲಸ ನಿಲ್ಲಿಸಬಾರದು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಜರಿದ್ದರು.