Site icon Vistara News

Sagara News : ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬೇಳೂರು ಗೋಪಾಲಕೃಷ್ಣ

#image_title

ಸಾಗರ: “ನಗರ ವ್ಯಾಪ್ತಿಯಲ್ಲಿ ಎಲ್ಲ ಕಡೆ ಹೆಂಡದ ಅಂಗಡಿ ಇದೆ. ಆದರೆ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಕೊಡದೆ ಇದ್ದರೆ ಆಡಳಿತ ಇದ್ದು ಇಲ್ಲದಂತೆ” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ನಗರಸಭೆ ಅಧಿಕಾರಿಗಳನ್ನು ಖಾರವಾಗಿ ತರಾಟೆಗೆ (Sagara News) ತೆಗೆದುಕೊಂಡಿದ್ದಾರೆ.

ಇಲ್ಲಿನ ನಗರಸಭೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, “ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ” ಎಂದು ಹೇಳಿದರು.

ಇದನ್ನೂ ಓದಿ: Road Accident: ಸಾಗರದಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು; ಚಾಲಕ ಪರಾರಿ
“ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅಂಬುಗಳಲೆಯಲ್ಲಿ ಪದೇಪದೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಮುಂದಿನ ವರ್ಷದಿಂದ ಬೇಸಿಗೆ ಆರಂಭಕ್ಕೆ ಮೊದಲು ಬಸವನಹೊಳೆ ಡ್ಯಾಂಗೆ ಶರಾವತಿ ಹಿನ್ನೀರಿನ ನೀರು ತುಂಬಿಸಿ ನಗರವ್ಯಾಪ್ತಿಯ ಜನರಿಗೆ ಪೂರೈಕೆ ಮಾಡಬೇಕು” ಎಂದು ಶಾಸಕರು ಸೂಚನೆ ನೀಡಿದರು. ಹಾಗೆಯೇ, “ಜನರು ನೀರು ಬಂದಿಲ್ಲ ಎಂದು ನನ್ನ ಗಮನಕ್ಕೆ ತಂದರೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

“ನಗರಸಭೆಗೆ ಬರುವ ಜನರ ಕೆಲಸಗಳು ತಕ್ಷಣ ಆಗಬೇಕು. ನಾಳೆ ಬಾ ಎನ್ನುವ ಬೋರ್ಡ್ ತಗುಲಿ ಹಾಕುವುದು ಬೇಡ. ಜೊತೆಗೆ ಬ್ರೋಕರ್‌ಗಳು ನಗರಸಭೆ ಕಾಂಪೋಂಡ್ ಒಳಗೆ ಬರದಂತೆ ನೋಡಿಕೊಳ್ಳಿ. ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಿ. ತಾತ್ಕಾಲಿಕವಾಗಿ ಹೆಚ್ಚುವರಿಯಾಗಿ 30 ಗುತ್ತಿಗೆ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಜೂ. 10ರೊಳಗೆ ನಗರದ 31 ವಾರ್ಡ್‍ಗಳಲ್ಲೂ ಸ್ವಚ್ಛತಾ ಕೆಲಸ ಮುಗಿಸಬೇಕು. ಗಣಪತಿ ಕೆರೆ ಅಭಿವೃದ್ದಿಗೆ ಬಂದಿರುವ 80 ಲಕ್ಷ ರೂ.ಗಳನ್ನು ಬೇರೆಬೇರೆ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಬಳಕೆ ಮಾಡಿಕೊಳ್ಳಲಾಗುತ್ತದೆ. ನಗರೋತ್ಥಾನ, ವಿಶೇಷ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಂಡು ಮಳೆಗಾಲದೊಳಗೆ ಮುಗಿಸಬೇಕು” ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Sagar Election Results: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ ಬೇಳೂರು; ಸೋಲು ಕಂಡ ಹಾಲಪ್ಪ
ಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ನಕ್ಷತ್ರ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಭಕ್ತಾದಿಗಳು, ವಾಯುವಿಹಾರಿಗಳು ಬಂದು ಕುಳಿತುಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸುವ ಚಿಂತನೆ ನಡೆಸಲಾಗಿದೆ. ಗಣಪತಿ ಕೆರೆ ಒತ್ತುವರಿಗೆ ಸಂಬಂಧಪಟ್ಟಂತೆ ಸದ್ಯದಲ್ಲಿಯೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೌರಾಯುಕ್ತರನ್ನು ಒಳಗೊಂಡ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ನಗರವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಲೇಔಟ್‍ಗಳು ಅಣಬೆಯಂತೆ ಮೇಲೆಳುತ್ತಿದ್ದು, ಸದ್ಯ ಯಾವುದೇ ಹೊಸ ಲೇಔಟ್‍ಗಳ ನಿರ್ಮಾಣಕ್ಕೆ ಅನುಮತಿ ಕೊಡಬಾರದು. ನಗರವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಸೇಲ್‍ಸರ್ಟಿಫೀಕೇಟ್ ಹಗರಣವನ್ನು ಉಪವಿಭಾಗಾಧಿಕಾರಿಗಳ ಮೂಲಕ ತನಿಖೆ ನಡೆಸಲು ಆದೇಶ ನೀಡಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಉಪವಿಭಾಗಾಧಿಕಾರಿ ಪಲ್ಲವಿ ಸಾತನೇಹಳ್ಳಿ, ಪ್ರಭಾರಿ ಪೌರಾಯುಕ್ತ ಎಚ್.ಕೆ ನಾಗಪ್ಪ,ನಗರಸಭೆ ಸದಸ್ಯರಾದ ಮಂಡಗಳಲೆ ಗಣಪತಿ,ತಸ್ರೀಫ್ ಇಬ್ರಾಹಿಂ, ಮಧುಮಾಲತಿ, ಎನ್.ಲಲಿತಮ್ಮ, ಸಬೀನಾ ತನ್ವೀರ್, ಆರ್.ಶ್ರೀನಿವಾಸ್, ಅರವಿಂದ ರಾಯ್ಕರ್, ಸಯ್ಯದ್ ಜಾಕಿರ್, ಶಂಕರ್, ಲಿಂಗರಾಜ್, ಶಾಹಿನಾ ಇನ್ನಿತರರು ಹಾಜರಿದ್ದರು.

Exit mobile version