Site icon Vistara News

Sagara News: ಮಾಜಿ ಯೋಧ ಗಣಪತಿ ಭೂಮಿ ಅತಿಕ್ರಮಣ ಮಾಡಿಕೊಂಡಿಲ್ಲ; ಮಾಜಿ ಯೋಧರ ಸಂಘದಿಂದ ಸ್ಪಷ್ಟನೆ

#image_title

ಸಾಗರ: ತಾಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿ ಸಿರಗುಪ್ಪೆ ಗ್ರಾಮದ ಸರ್ವೇ ನಂ. 62ರಲ್ಲಿ ಮಾಜಿ ಯೋಧ ಗಣಪತಿ ಅವರು 1.50 ಎಕರೆ ಜಮೀನಿಗೆ ಬಗರ್‌ಹುಕುಂ ಅಡಿ ಸೈನಿಕರ ಕೋಟಾದಡಿ ಅರ್ಜಿ ಸಲ್ಲಿಸಿದ್ದಾರೆಯೇ ವಿನಃ ಅತಿಕ್ರಮಣ ಮಾಡುವ ಪ್ರಯತ್ನ ನಡೆಸಿಲ್ಲ ಎಂದು ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ರಾಜ್ಯ ಉಪಾಧ್ಯಕ್ಷ ಸುಭಾಷ್‌ಚಂದ್ರ ತೇಜಸ್ವಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಂಚಾಯ್ತಿ ವ್ಯಾಪ್ತಿಯಲ್ಲಿರುವ ರಾಜು ಗೌಡ, ದುಷ್ಯಂತ್ ಇನ್ನಿತರರು ಮಾಜಿ ಸೈನಿಕನ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಸಂಘ ಖಂಡಿಸುತ್ತದೆ” ಎಂದರು.

“ಮಾಜಿ ಯೋಧ ಗಣಪತಿ ಅವರ ಪತ್ನಿ ಶಶಿಕಲಾ ಉಳ್ಳೂರು ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಣಪತಿ ಅವರು ಸುಮಾರು 30 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ನಂತರ ತಮ್ಮ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಸೈನಿಕರ ಕೋಟಾದಡಿ ಜಾಗ ಮಂಜೂರಾತಿಗೆ ಗಣಪತಿ ಅವರು ಅರ್ಜಿ ಸಲ್ಲಿಸಿದ್ದಾರೆ. ಬೇರೆಯವರು ಜಾಗ ಒತ್ತುವರಿ ಮಾಡುತ್ತಾರೆಂದು 1.50 ಎಕರೆ ಜಮೀನಿಗೆ ಕಲ್ಲುಬೇಲಿ ಹಾಕಿ ರಕ್ಷಿಸಿಕೊಂಡಿದ್ದಾರೆ. ಗ್ರಾಮದ ಕೆಲವರು ಇದನ್ನೇ ಒತ್ತುವರಿ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ಯೋಧನ ಮೇಲೆ ಒತ್ತುವರಿ ಆರೋಪ ಹೊರಿಸುತ್ತಿರುವ ರಾಜುಗೌಡ, ದುಷ್ಯಂತ್ ಇನ್ನಿತರರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅರಣ್ಯ, ಗೋಮಾಳ ಜಮೀನು ಒತ್ತುವರಿ ಮಾಡಿದ್ದಾರೆ. ಗ್ರಾಮಸ್ಥರು ದೇಶ ಸೇವೆ ಮಾಡಿ ಬಂದ ನಿವೃತ್ತ ಯೋಧ ಗಣಪತಿ ಅವರಿಗೆ ಜಮೀನು ಮಂಜೂರು ಮಾಡಲು ಅನಗತ್ಯ ಕಿರುಕುಳ ನೀಡಬಾರದು” ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್‌ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ

ಉಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ಗಣಪತಿ ದಂಪತಿ ಮಾತನಾಡಿ, ಸ.ನಂ. 62ರಲ್ಲಿ 1.50 ಎಕರೆ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಬಂದು ಸ್ಥಳ ಪರಿಶೀಲನೆ ನಡೆಸಲಿ. ನಾವು ಯಾವುದೇ ಜಮೀನು ಅತಿಕ್ರಮಣ ಮಾಡಿಲ್ಲ. ಜಾಗ ಸಂರಕ್ಷಣೆಗಾಗಿ ಹಾಕಿದ್ದ ತಂತಿಬೇಲಿಯನ್ನು ರಾಜುಗೌಡ, ದುಷ್ಯಂತ್ ಇನ್ನಿತರರು ಬಲವಂತವಾಗಿ ಕಿತ್ತು ಹಾಕಿ, ಕಲ್ಲುಗಳನ್ನು ಒಡೆದು ಹಾಕಿದ್ದಾರೆ. ನಿಮ್ಮ ಜಮೀನಿನ ತಂಟೆಗೆ ಬರುವುದಿಲ್ಲ 3 ಲಕ್ಷ ರೂ. ಕೊಡಿ ಎಂದು ದುಷ್ಯಂತ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡುವವರು ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ, ಗೋಮಾಳ ಒತ್ತುವರಿ ಮಾಡಿದ್ದಾರೆ. ತಾವು ಇಲ್ಲದ ಸಂದರ್ಭದಲ್ಲಿ ಸಂರಕ್ಷಿಸಿಕೊಂಡು ಬಂದ ಜಾಗಕ್ಕೆ ನುಗ್ಗಿ ದಾಂದಲೆ ಮಾಡಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಲಹೆಗಾರ ಜಿ.ಎಸ್. ವೆಂಕಟೇಶ್, ಮಾಜಿ ಯೋಧ ದಿವಾಕರ್ ಹಾಜರಿದ್ದರು.

Exit mobile version