Site icon Vistara News

Sagara News: ಅರಣ್ಯ ಇಲಾಖೆ ವಿರುದ್ಧ ಹೈಕೋರ್ಟ್‌ ನ್ಯಾಯಮೂರ್ತಿಗೆ ಪತ್ರ ಬರೆಯಲು ಮುಂದಾದ ರೈತರು

#image_title

ಸಾಗರ: ಸೊರಬ ತಾಲ್ಲೂಕು ತಾಳಗುಪ್ಪ ಗ್ರಾಮದ ಆರು ರೈತರ ತೋಟ ನಾಶ ಮಾಡಿರುವುದು ಹಾಗೂ ಸಿಡ್ಡಿಹಳ್ಳಿ ನಿವಾಸಿಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ತಾಳಗುಪ್ಪ ಗ್ರಾಮದ 6 ರೈತರ ತೋಟ ನಾಶ ಮಾಡಿ ದೌರ್ಜನ್ಯ ನಡೆಸಲಾಗಿದೆ. ಈ ದೌರ್ಜನ್ಯ ನಡೆಸಿರುವ ಅರಣ್ಯಾಧಿಕಾರಿಗಳ ಮೇಲೆ ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: Drowned in Reservoir: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವತಿಯರು ಸೇರಿ ಮೂವರ ಸಾವು

“ತಾಳಗುಪ್ಪ ಗ್ರಾಮದ ಆರು ರೈತರ 20 ಎಕರೆ ತೋಟವನ್ನು ನಾಶ ಮಾಡಿ ಬಾಳೆ ಮತ್ತು ತೆಂಗಿನ ಮರಗಳನ್ನು ಕಡಿದು ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಹಾಲಿ ಶಾಸಕ ಕುಮಾರ ಬಂಗಾರಪ್ಪ ಮತ್ತು ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ ರೈತರ ಕಷ್ಟವನ್ನು ಕೇಳಿಲ್ಲ. ದೌರ್ಜನ್ಯಕ್ಕೆ ಒಳಗಾದ ರೈತರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇರುವಾಗಲೇ ಅರಣ್ಯಾಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದರ ಜತೆಗೆ ಅರಣ್ಯ ಹಕ್ಕು ಕಾಯ್ದೆಯಡಿ ರೈತರು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಸಮಿತಿಯಲ್ಲಿ ಅರ್ಜಿ ಇರುವಾಗ ಒಕ್ಕಲೆಬ್ಬಿಸಬಾರದು ಎನ್ನುವ ನಿಯಮವಿದೆ. ಹಾಗೆಯೇ 1978ರ ಏಪ್ರಿಲ್‌ 27ಕ್ಕಿಂತ ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರೆ ಅಂತವರನ್ನು ಒಕ್ಕಲೆಬ್ಬಿಸಬಾರದು ಎನ್ನುವ ನಿಯಮವಿದೆ. ಆದರೆ ಅರಣ್ಯ ಇಲಾಖೆ ಈ ಎಲ್ಲ ನಿಯಮ ಗಾಳಿಗೆ ತೂರಿದೆ. ಸಿಡ್ಡಿಹಳ್ಳಿಯ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್‌ ಕೊಟ್ಟಿದೆ” ಎಂದು ಅವರು ದೂರಿದರು.

“ಶಿವಮೊಗ್ಗ ಜಿಲ್ಲೆಯಲ್ಲಿ 80 ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರಿದ್ದಾರೆ. ಸೊರಬದ ಕಾನೂನು ಪಂಡಿತನೊಬ್ಬ ಬಡ ರೈತರಿಗೆ ಬೇರೆ ಬೇರೆ ರೀತಿಯ ಕಾನೂನು ತೊಡಕು ಉಂಟು ಮಾಡುವ ಮೂಲಕ ವಿಘ್ನ ಸಂತೋಷವನ್ನು ಅನುಭವಿಸುತ್ತಿದ್ದಾನೆ. ಸರ್ಕಾರ ಇಂತಹ ಸಂದರ್ಭದಲ್ಲಿ ವಸ್ತುನಿಷ್ಟವಾಗಿ ಪರಿಶೀಲನೆ ನಡೆಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಆರು ಜನ ರೈತರನ್ನು ಒಕ್ಕಲೆಬ್ಬಿಸಿರುವ ಕುರಿತು ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಿ, ಮಾನವ ಹಕ್ಕು ಆಯೋಗಕ್ಕೂ ಮನವಿ ಸಲ್ಲಿಸಲಾಗುತ್ತದೆ” ಎಂದರು.

ಇದನ್ನೂ ಓದಿ: Karnataka Election: ಸೊರಬದಲ್ಲಿ ಬಿಜೆಪಿಯಿಂದ ಡಾ. ಜ್ಞಾನೇಶ್‌ಗೆ ಟಿಕೆಟ್ ನೀಡಲು ಆಗ್ರಹಿಸಿ ಬೃಹತ್ ರ್‍ಯಾಲಿ, ಸಂಸದರಿಗೆ ಮನವಿ ಸಲ್ಲಿಕೆ

ಸಿಡ್ಡಿಹಳ್ಳಿಯಲ್ಲಿ 140ಕ್ಕೂ ಹೆಚ್ಚು ಕುಟುಂಬಗಳು ಅರಣ್ಯಭೂಮಿಯಲ್ಲಿ ವಾಸ ಮಾಡುತ್ತಿದ್ದು ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇತ್ಯರ್ಥದ ಹಂತದಲ್ಲಿದೆ. ಸಾಗರ ಡಿಎಫ್‍ಒ ಮತ್ತು ಸೊರಬ ಎಸಿಎಫ್ ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಿಡ್ಡಿಹಳ್ಳಿ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒಕ್ಕಲೆಬಿಸಬಾರದು ಎಂದು ಕೋರಿದ್ದಾರೆ. ಆದರೂ ಅರಣ್ಯ ಇಲಾಖೆ ನೋಟಿಸ್ ನೀಡಿರುವ ಕ್ರಮ ಖಂಡನೀಯ. ರಾಜ್ಯ ಸರ್ಕಾರ ರೈತರನ್ನು ಧಮನ ಮಾಡಲು ಮುಂದಾಗುತ್ತಿರುವ ಕ್ರಮವನ್ನು ಸಮಿತಿ ಖಂಡಿಸುತ್ತದೆ ಎಂದರು.

ಗೋಷ್ಟಿಯಲ್ಲಿ ಪರಶುರಾಮ್ ಸಿಡ್ಡಿಹಳ್ಳಿ, ವಿರೇಶ್ ಗೌಡ, ಬಸವರಾಜ್, ನಾಗರಾಜ್ ಸಿಡ್ಡಿಹಳ್ಳಿ, ನಿಂಗಪ್ಪ, ಸುಭಾಷ್ ಎಲ್.ವಿ. ಹಾಜರಿದ್ದರು.

Exit mobile version