ಸಾಗರ: ಗ್ರಾಮೀಣ ಭಾಗದ ಜನರಿಗೆ ಕಾಂಗ್ರೆಸ್ ಅಗತ್ಯತೆ ಬಗ್ಗೆ ಅರಿವು ಮೂಡಿಸುವ, ಸಾಮಾಜಿಕ ನ್ಯಾಯದ ಅಗತ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ತಾಲ್ಲೂಕಿನ ತುಮರಿ ಶಾಂತಾವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ಕರೂರು ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ ಅವರು ಮಾತನಾಡಿದರು.
“ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಯತ್ನ ನಡೆಯಬೇಕಾಗಿದೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಜನರು ಧ್ವನಿ ಎತ್ತಬೇಕು. ಜನರಿಗೆ ಭೂಮಿ ಹಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಪಕ್ಷವು ಗೋಪಾಲಕೃಷ್ಣ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದೆ. ಜನರಿಗೆ ನ್ಯಾಯ ಒದಗಿಸುವ ಶಕ್ತಿ ಗೋಪಾಲಕೃಷ್ಣ ಅವರಿಗೆ ಇದ್ದು, ಸಂಘಟನಾತ್ಮಕ ಕೆಲಸ ಮಾಡುವ ಮೂಲಕ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು” ಎಂದು ಕಾಗೋಡು ತಿಮ್ಮಪ್ಪ ಕರೆ ನೀಡಿದರು.
ಇದನ್ನೂ ಓದಿ: Lokayukta Raid : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಏಪ್ರಿಲ್ 11ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ
ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮಾತನಾಡಿ, “ಶರಾವತಿ ಹಿನ್ನೀರಿನ ರೈತರನ್ನು ಅರಣ್ಯ ಕಾಯ್ದೆ, ಜೀವವೈವಿಧ್ಯ ಕಾಯ್ದೆ ಹೆಸರಿನಲ್ಲಿ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿ ಬಂದ ಬಿಜೆಪಿ ಸರ್ಕಾರ ರೈತರ ಪರವಾಗಿ ನಿಲ್ಲುತ್ತಿಲ್ಲ. ಶಾಸಕ ಹರತಾಳು ಹಾಲಪ್ಪ ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ ಚಕಾರ ಎತ್ತದೆ ಇರುವುದು ಅವರಿಗೆ ರೈತರ ಬಗ್ಗೆ ಇರುವ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಎರಡು ವರ್ಷದ ಹಿಂದೆ ಬ್ಯಾಕೋಡಿನಲ್ಲಿ ನಡೆದ ವೃದ್ಧ ದಂಪತಿಗಳ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಈತನಕ ಬಂಧಿಸಿಲ್ಲ. ಎಲೆಚುಕ್ಕೆ ರೋಗದಿಂದ ಫಸಲು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಕ್ಷೇತ್ರದಲ್ಲಿ ಮದ್ಯದಂಗಡಿ ಹೆಚ್ಚಿದೆಯೆ ಬಿಟ್ಟರೆ ಅಭಿವೃದ್ಧಿಯಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಕೆ.ಹೊಳೆಯಪ್ಪ, ಹರೀಶ್ ಗಂಟೆ, ಅಶೋಕ ಬೇಳೂರು ಇನ್ನಿತರರು ಹಾಜರಿದ್ದರು.