ಸಾಗರ : ಮಲೆನಾಡು ಪ್ರದೇಶದ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಮತ್ತು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ (ಡಿ.೧೫) ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಶಾಖೆಯ ವತಿಯಿಂದ ಶಾಸಕರ ಕಚೇರಿ ಎದುರು (Sagara News) ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಅತಿವೃಷ್ಟಿಯಿಂದಾಗಿ ಅಡಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಮಲೆನಾಡಿನ ರೈತರು ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೃಷಿಗಾಗಿ ಮಾಡಿಕೊಂಡ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ ಆಮದು ನೀತಿಯಿಂದ ವಿದೇಶಿ ಅಡಕೆ ಭಾರತೀಯ ಮಾರುಕಟ್ಟೆಗೆ ಬಂದಿದ್ದು ಅಡಕೆ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಹೇಳಿದರು.
ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ. ರೈತರು ತಾವು ಬೆಳೆದ ಭತ್ತವನ್ನು ಖಾಸಗಿಯಾಗಿ ಬೇರೆ ಬೇರೆ ಕಡೆ ಕಡಿಮೆ ಬೆಲೆಗೆ ಮಾರುವ ಸ್ಥಿತಿ ನಿರ್ಮಾಣವಾಗಿದೆ. ಮಿಲ್‍ಗಳಲ್ಲಿ ರೈತರ ಭತ್ತವನ್ನು ಕಾಲಿನಡಿಯ ಕಸಕ್ಕಿಂತ ಕೀಳಾಗಿ ನೋಡುತ್ತಿದ್ದಾರೆ. ಒಂದರ್ಥದಲ್ಲಿ ರೈತ ದ್ರೋಹಿ ಸರ್ಕಾರ ಇದಾಗಿದೆ. ಶಾಸಕರು ಹೆಂಡದ ಅಂಗಡಿ ಪ್ರಾರಂಭ ಮಾಡಲು ಪರವಾನಗಿ ನೀಡುತ್ತಾರೆ. ಭತ್ತ ಖರೀದಿ ಕೇಂದ್ರ ಪ್ರಾರಂಭಕ್ಕೆ ಮನಸ್ಸು ಮಾಡುತ್ತಿಲ್ಲ. ತಕ್ಷಣ ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು. ರೈತರ ಸಂಕಷ್ಟವನ್ನು ಅರಿತು ಪೂರ್ಣ ಬೆಳೆಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Rajya Sabha | ಜಾಹೀರಾತು, ಪ್ರಚಾರಕ್ಕಾಗಿ 5 ವರ್ಷದಲ್ಲಿ 3,723 ಕೋಟಿ ರೂ. ವೆಚ್ಚ ಮಾಡಿದ ಕೇಂದ್ರ ಸರ್ಕಾರ!
ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಮಾತನಾಡಿ, ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಶಾಸಕರಾದ ಹಾಲಪ್ಪ, ಕುಮಾರ ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈವರೆಗೆ ಶಾಸಕದ್ವಯರು ಸಾಲ ಮನ್ನಾದ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸಿಲ್ಲ. ಅಡಕೆ ಬೆಲೆ ಕುಸಿದಿದೆ, ಭತ್ತಕ್ಕೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಮೆಕ್ಕೆ ಜೋಳಕ್ಕೆ ಸೂಕ್ತ ಬೆಲೆ ಇಲ್ಲ. ಒಟ್ಟಾರೆ ರೈತರ ಬಗ್ಗೆ ಸರ್ಕಾರಕ್ಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ರೈತರ ಸಾಲ ಮನ್ನಾ ಮಾಡದೆ ಹೋದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ದೂಗೂರು ಪರಮೇಶ್ವರ, ಎನ್.ಡಿ.ವಸಂತ ಕುಮಾರ್, ರಮೇಶ್ ಐಗಿನಬೈಲು, ಶಂಕರ್, ಕೃಷ್ಣಪ್ಪ, ಗಣಪತಿ, ದ್ಯಾವಪ್ಪ ಕೆಳದಿ, ವಿಠ್ಠಲ್ ರಾವ್, ರಾಜೇಶ್, ವಿಜಯಕುಮಾರ್, ಮಂಜಪ್ಪ ಗುತ್ನಳ್ಳಿ, ಪರಮೇಶ್, ಪ್ರಶಾಂತ್ ಹಾಜರಿದ್ದರು.
ಇದನ್ನೂ ಓದಿ | Mobile Blast | ಜರ್ಮನಿಯಲ್ಲಿ ಮೊಬೈಲ್ ಬ್ಲಾಸ್ಟ್; ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು