ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಕುಟುಂಬಕ್ಕೆ ಸೇರಿದ ಯುನೈಟೆಡ್ ಟ್ರೇಡಿಂಗ್ ಕಂಪನಿಯ ಕಟ್ಟಡದ ಹಿಂಬಾಗಿಲ ಬೀಗ ಒಡೆದು 17 ಲಕ್ಷ ರೂ. ಮೌಲ್ಯದ ಸಿಗರೇಟ್ ಪೆಟ್ಟಿಗೆಗಳನ್ನು ದೋಚಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಳ್ಳರು ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ಗಳನ್ನೂ (Sagara News) ಕದ್ದೊಯ್ದಿದ್ದಾರೆ.
ನಗರದ ಸೊರಬ ವೃತ್ತದಲ್ಲಿರುವ ಕಂಪನಿಯ ಕಚೇರಿಯಲ್ಲಿ ಭಾನುವಾರ ಮಧ್ಯ ರಾತ್ರಿ ವೇಳೆಗೆ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಕಳ್ಳತನ ನಡೆದಿರುವುದು ಸಿಬ್ಬಂದಿ ಅರಿವಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Sagar Election Results: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ ಬೇಳೂರು; ಸೋಲು ಕಂಡ ಹಾಲಪ್ಪ
ಕೂಡಲೇ ಸ್ಥಳಕ್ಕಾಗಮಿಸಿದ ಎಎಸ್‌ಪಿ ರೋಹನ್ ಜಗದೀಶ್ ನೇತೃತ್ವದ ತಂಡವು ಕೂಲಂಕಷವಾಗಿ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಶಿವಮೊಗ್ಗದಿಂದ ಶ್ವಾನದಳ, ಬೆರಳಚ್ಚು ತಜ್ಞರು ಇಲ್ಲಿಗೆ ಬಂದು ತಪಾಸಣೆಯಲ್ಲಿ ನಡೆಸಿದ್ದಾರೆ. ಜತೆಯಲ್ಲಿ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಲ್ಲದೆ, ಯುನೈಟೆಡ್ ಟ್ರೇಡಿಂಗ್ ಕಂಪನಿ ಹಾಗೂ ಸುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಘಟನೆ ಸಂಬಂಧ ಸಂಸ್ಥೆ ಮುಖ್ಯಸ್ಥೆ ಅನುರಾಧಾ ಕಾಗೋಡು ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.