Site icon Vistara News

ಸರಕಾರಿ ನೌಕರರ ಸಂಘದಿಂದ ಮಕ್ಕಳಿಗೆ ಉಚಿತ ಸ್ಕೂಲ್‌ಬ್ಯಾಗ್, ನೋಟ್‌ಬುಕ್

ಶಿವಮೊಗ್ಗ: ರಾಜ್ಯದ ಒಳನಾಡು ಹಾಗೂ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘವು 50 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಒದಗಿಸಲು ಉದ್ದೇಶಿಸಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಅವರು ಸೋಮವಾರ ಶಿವಮೊಗ್ಗ ನಗರದ ಬಿ.ಬಿ.ಸ್ಟ್ರೀಟ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರ ಹೆಸರಿನಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಕೂಲ್‌ಬ್ಯಾಗ್, ನೋಟ್‌ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿ ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ನಗರದ ಇನ್ನೂ ಹತ್ತು ಶಾಲೆಗಳ ಮಕ್ಕಳಿಗೆ ದಾನಿಗಳ ನೆರವಿನಿಂದ ಪಠ್ಯಪುಸ್ತಕ, ಬ್ಯಾಗ್ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಕೊರೊನಾ ಸೋಂಕಿನ ಕಾರಣದಿಂದಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿವೆ. ಶೇ.70ರಷ್ಟು ಮಕ್ಕಳು ತಮ್ಮ ಕಲಿಕೆಯನ್ನು ಮರೆತಿದ್ದಾರೆ. ಇದರಿಂದಾಗಿ ದೇಶದ ಮೇಲೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದ ಅವರು, ಇದನ್ನು ಮಕ್ಕಳಲ್ಲಿ ಪುನರ್ ಮನನ ಮಾಡಲು ಶಿಕ್ಷಣ ತಜ್ಞರ ಸಲಹೆಯಂತೆ ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ 2 ದಿನಗಳ ತರಬೇತಿ ನೀಡಲಾಗಿದೆ ಎಂದರು.

ಇದನ್ನೂ ಓದಿ| ಶಿವಮೊಗ್ಗದಲ್ಲಿ ಬಿಜೆಪಿ ನಾಯಕನ ಸ್ನೇಹಿತರ ಕಾರಿಗೆ ಕಲ್ಲು ತೂರಿದ್ಯಾರು?

ಸರಕಾರವು ಈಗಾಗಲೇ ಶೇ.70ರಷ್ಟು ಪುಸ್ತಕ, ಸಮವಸ್ತ್ರ ಮುಂತಾದವುಗಳನ್ನು ಸರಬರಾಜು ಮಾಡಿದೆ. ಮುಂದಿನ 3-4 ದಿನಗಳಲ್ಲಿ ಉಳಿದ ಎಲ್ಲಾ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ಒದಗಿಸಲಾಗುವುದು ಎಂದರು. ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಆರ್. ಮೋಹನ್‌ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಬಿ.ರುದ್ರಪ್ಪ, ನೌಕರರ ಸಂಘದ ಕಾರ್ಯದರ್ಶಿ ಕೃಷ್ನಮೂರ್ತಿ, ಹಿರಿಯ ಉಪಾಧ್ಯಕ್ಷ ಪಾಪಣ್ಣ, ಮಹಾನಗರಪಾಲಿಕೆ ಸದಸ್ಯೆ ಭಾನುಮತಿ ಶೇಟ್, ಎಚ್.ಡಿ.ಎಂ.ಸಿ. ಅಧ್ಯಕ್ಷ ಗಣೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಬೇಬಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ| ಇಂದಿನಿಂದ ಶಾಲೆ ಆರಂಭ: ಆರತಿ ಎತ್ತಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು

Exit mobile version