ಶಿವಮೊಗ್ಗ: ತಾಲೂಕಿನ (Shimoga News) ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಎಂಬ ಅವಳಿ ಗ್ರಾಮಗಳ ಜನ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದಿಂದ ನಿರಾಶ್ರಿತರಾಗಿದ್ದವರು. ಆದರೆ ನಾಡಿಗೆ ಬೆಳಕು ಕೊಟ್ಟವರ ಬದುಕು ಮಾತ್ರ ಕತ್ತಲೆಯಲ್ಲಿದೆ. ಇದೀಗ ಈ ಗ್ರಾಮಗಳ ಕತ್ತಲ ಬದುಕು ಮರೆಯಾಗುವ ದಿನ ಬಂದಿದೆ.
ಭೂಮಿಯ ಅಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ 360.41 ಲಕ್ಷ ರೂ.ಗಳ ಯೋಜನೆಗೆ ಸರ್ಕಾರ ಅಸ್ತು ಎಂದಿದ್ದು, ವಿದ್ಯುದ್ದೀಕರಣ ಯೋಜನೆ ಕಾಮಗಾರಿಗೆ ಭಾನುವಾರ (ಡಿ.11ರಂದು) ಶಾಸಕ ಅಶೋಕ ನಾಯ್ಕ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ನಿರಾಶ್ರಿತರ ಹೋರಾಟದ ಹಾದಿ
ಐದಾರು ವರ್ಷಗಳ ಹಿಂದೆ ಈ ಗ್ರಾಮಕ್ಕೆ ಸೋಲಾರ್ ಬೆಳಕು ಬರುವವರೆಗೂ ಮಕ್ಕಳು ಸೀಮೆಎಣ್ಣೆ ಬುರುಡಿಯ ಬೆಳಕಿನಲ್ಲಿ ಓದಬೇಕಾಗಿತ್ತು. ಈಗ ಸೋಲಾರ್ ವಿದ್ಯುತ್ ಬಂದಿದ್ದರೂ ಅದು ಕೇವಲ ಬಲ್ಬ್‌ಗೆ ಸೀಮಿತ. ಮಿಕ್ಸಿ ಓಡುವುದಿಲ್ಲ, ಟಿವಿ ವೀಕ್ಷಣೆ ಇಲ್ಲ, ಫ್ರಿಡ್ಜ್ ಇಲ್ಲ. ಹೀಗೆ ಈ ದಿನಮಾನದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಗ್ರಾಮಸ್ಥರು ಈ ಹಿಂದೆ ಹಲವು ಬಾರಿ ವಿಧಾನಸೌಧಕ್ಕೆ ಭೇಟಿ ನೀಡಿ ಮನವಿಯೊಂದಿಗೆ ಪ್ರತಿಭಟನೆ ಮಾಡಿದ್ದರು. ಪ್ರತಿ ಚುನಾವಣೆಯಲ್ಲಿಯೂ ಶೆಟ್ಟಿಹಳ್ಳಿಗೆ ಕರೆಂಟ್ ಕೊಡುವ ಭರವಸೆ ನೀಡಲಾಗುತ್ತಿತ್ತು. ಆದರೆ ಅದು ಮತ್ತೊಂದು ಚುನಾವಣೆ ತನಕ ಹಾಗೇ ಭರವಸೆಯಾಗಿಯೇ ಇರುತ್ತಿತ್ತು. ಇದೀಗ ಈ ಅವಳಿ ಗ್ರಾಮಗಳ ಕತ್ತಲ ಬದುಕು ಮುಗಿಯುವ ದಿನ ಹತ್ತಿರಬಂದಿದೆ.
ಶಿವಮೊಗ್ಗದಿಂದ ಸುಮಾರು 20 ಕಿ.ಮೀ ದೂರವಿರುವ ಶೆಟ್ಟಿಹಳ್ಳಿ-ಚಿತ್ರಶೆಟ್ಟಿ ಅವಳಿ ಗ್ರಾಮಗಳಲ್ಲಿ ಸುಮಾರು 120 ಮನೆಗಳಿವೆ. ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನ ಈ ಹಿಂದೆಯೂ ನಡೆದಿತ್ತು. ಅಲ್ಲಿಗೆ ವಿದ್ಯುತ್ ಸಂಪರ್ಕ ಕೊಡುವುದರಿಂದ ವಿದ್ಯುಚ್ಛಕ್ತಿ ಮಂಡಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಒಂದು ಕಾರಣವಾದರೆ, ದಟ್ಟ ಅರಣ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಲು ಅರಣ್ಯ ಇಲಾಖೆಯು ಅನುಮತಿ ನೀಡಿರಲಿಲ್ಲ. ಆನೆ ಹಾವಳಿ, ಮೂಲಭೂತ ಸೌಕರ್ಯ ಕೊರತೆ ಮುಂದಿಟ್ಟುಕೊಂಡು ಗ್ರಾಮಸ್ಥರನ್ನು ಅಲ್ಲಿಂದ ಸ್ಥಳಾಂತರಿಸುವ ಯೋಜನೆ ಕೂಡ ತಯಾರಿಸಲಾಗಿತ್ತು. ಆದರೆ ಬಹುತೇಕರು ಅಲ್ಲಿಂದ ಸ್ಥಳಾಂತರಗೊಳ್ಳಲು ಒಪ್ಪಿರಲಿಲ್ಲ.
ಇದನ್ನೂ ಓದಿ | Cyclone Mandous | ಬೆಂಗಳೂರು, ಗಡಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ, ಗಾಳಿ, ಚಳಿ
ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೆಟ್ಟಿಹಳ್ಳಿಗೆ ಕರೆಂಟ್ ನೀಡಲು ನಿರ್ಣಯಿಸಲಾಗಿತ್ತು. ಪುರದಾಳಿನಿಂದ ವಿದ್ಯುತ್ ಕಂಬಗಳನ್ನು ಕೂಡ ನೆಡಲಾಗಿತ್ತು. ಬಂಗಾರಪ್ಪ ಅವರು ಅಡಿಗಲ್ಲು ಕೂಡ ಹಾಕಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎರಡು ಬಾರಿ ಶೆಟ್ಟಿಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡಿಗಲ್ಲು ಹಾಕಿದ್ದರು. ಅದರೆ ಅರಣ್ಯ ಇಲಾಖೆಯ ಅಸಹಕಾರದಿಂದ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯ ಆಗಿರಲಿಲ್ಲ. ಈಗ 4ನೇ ಬಾರಿ ಭೂಗತ ಕೇಬಲ್ ಮೂಲಕ ವಿದ್ಯುತ್ ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಮಾಡಿದ ಪ್ರಯತ್ನ ಫಲಿಸಿದೆ. ಪರಿಸರ, ಅರಣ್ಯ ಇಲಾಖೆಯ ಅನುಮತಿ ಪಡೆದು ಭೂಗತ ಕೇಬಲ್ ಮೂಲಕ ವಿದ್ಯುತ್ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. ವಿದ್ಯುದ್ದೀಕರಣ ಯೋಜನೆ ಕಾಮಗಾರಿಗೆ ಶಾಸಕ ಅಶೋಕ ನಾಯ್ಕ್ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ತರೇ ಇರುವ ಈ ಗ್ರಾಮದ ಜನರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಹೀಗಾಗಿ ಆರು ದಶಕಗಳ ಕಾಲದ ಶೆಟ್ಟಿಹಳ್ಳಿ ಜನರ ಕತ್ತಲ ಬದುಕಿಗೆ ಬೆಳಕು ನೀಡುವ ಯೋಜನೆ ಹಿಂದಿನಂತೆ ಅಡಿಗಲ್ಲಿಗೇ ನಿಲ್ಲದೆ, ಗ್ರಾಮವನ್ನು ಬೆಳಗಲಿ ಎಂಬುದು ಗ್ರಾಮಸ್ಥರ ಆಶಯ.
ಇದನ್ನೂ ಓದಿ | Nammane Habba | ಡಿ. 13ರಂದು ಶಿರಸಿಯಲ್ಲಿ ಸಾಂಸ್ಕೃತಿಕ ಸಂಭ್ರಮದ ‘ನಮ್ಮನೆ ಹಬ್ಬ’