Site icon Vistara News

Shimoga News | ವ್ಯಕ್ತಿಗೆ ಬೀದಿ ನಾಯಿಗಳ ಮೇಲೆ ಪ್ರೀತಿ: ಜನರಿಗೆ ಕಿರಿಕಿರಿ, ಆತಂಕ

Street dog dog bite

ವಿವೇಕ ಮಹಾಲೆ, ವಿಸ್ತಾರ ನ್ಯೂಸ್‌ ಶಿವಮೊಗ್ಗ
ಪ್ರಾಣಿ ಪ್ರಿಯರಿಗೆ ನಾಯಿ ಅಂದ್ರೆ ಅಚ್ಚುಮೆಚ್ಚು. ಆದರೆ ಶ್ವಾನ ಪ್ರೀತಿ ಇತರರಿಗೆ ಕಿರಿಕಿರಿಯಾಗಂತೆ ಇರಬೇಕು. ಶಿವಮೊಗ್ಗದಲ್ಲೊಬ್ಬ (Shimoga News) ಬೀದಿ ನಾಯಿ ಪ್ರೇಮಿ ಇದ್ದಾರೆ. ಅವರು ಪ್ರತಿನಿತ್ಯ ಅವುಗಳಿಗೆ ಆಹಾರ ನೀಡುತ್ತಾರೆ. ಆದರೆ ಆತನ ಪ್ರೀತಿ ಬಡಾವಣೆಯ ನಿವಾಸಿಗಳಿಗೆ ತೀವ್ರ ತೊಂದರೆ ಉಂಟುಮಾಡಿದೆ. ಇದು ಠಾಣೆ ಮೆಟ್ಟಿಲೂ ಏರಿದೆ.

ಶಿವಮೊಗ್ಗದ ದೇವರಾಜ ಅರಸು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಈ ಬಡಾವಣೆಯಲ್ಲಿರುವ ಮೆಡಿಕಲ್ ರೆಪ್ರಸೆಂಟೇಟಿವ್‌ ಗಿರೀಶ್ ಎಂಬುವವರು ಕಳೆದ ಐದು ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತ ಬಂದಿದ್ದಾರೆ. ಹೀಗಾಗಿ ಈ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಾಯಿಗಳಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ರಾತ್ರಿ ವೇಳೆ ತಿರುಗಾಟಕ್ಕೂ ಭಯಪಡುವಂತಾಗಿದೆ. ಬೀದಿ ನಾಯಿಗಳು ಹಗಲು, ರಾತ್ರಿ ಬೊಗಳುವುದು, ರಸ್ತೆಯಲ್ಲಿ ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗುವುದು, ವಾಹನದ ಹತ್ತಿರ ಬಂದು ಸವಾರರಿಗೆ ಭಯ ಹುಟ್ಟಿಸುತ್ತಿವೆ. ಚಿಕ್ಕಮಕ್ಕಳಂತೂ ಮನೆಯಿಂದ ಹೊರಬರುವುದೇ ದುಸ್ತರ ಎನ್ನುವಂತಾಗಿದೆ. ಬೀದಿನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು, ಸಾರ್ವಜನಿಕರನ್ನು ಏಕಾಏಕಿ ಬೆನ್ನಟ್ಟುವ ಜತೆಗೆ ಕರ್ಕಶವಾಗಿ ಬೊಗಳಿ ಭಯ ಉಂಟು ಮಾಡುತ್ತಿವೆ. ಇದರಿಂದ ಈ ಬಡಾವಣೆಯ ಜನರು ರೋಸಿಹೋಗಿದ್ದಾರೆ. ಗಿರೀಶ್‌ ಅವರಿಗೆ ಬೀದಿ ನಾಯಿಗಳ ಮೇಲೆ ಪ್ರೀತಿ ಎಷ್ಟೆಂದರೆ ಅವರು ಹಲವು ನಾಯಿಗಳನ್ನು ತಮ್ಮ ಮನೆಯೊಳಗೇ ಸಾಕಿ ಸಲಹುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಇದನ್ನೂ ಓದಿ | Actor Duniya Vijay | ಹಲ್ಲೆ ಪ್ರಕರಣ: ಪಾನಿಪುರಿ ಕಿಟ್ಟಿ ಬಳಿಕ ಈಗ ದುನಿಯಾ ವಿಜಯ್‌ಗೆ ಹೈಗ್ರೌಂಡ್ಸ್‌ ಪೊಲೀಸರಿಂದ ನೋಟಿಸ್‌

ಬೀದಿನಾಯಿಗಳಿಗೆ ಅನಾರೋಗ್ಯ
ಬೀದಿನಾಯಿಗಳಲ್ಲಿ ಕೆಲವು ಅನಾರೋಗ್ಯದಿಂದ ಬಳಲುತ್ತಿವೆ. ಮೈ ಮೇಲಿನ ಕೂದಲು ಉದುರಿ, ಚರ್ಮ ಎದ್ದು ಕಾಣುತ್ತಿವೆ. ಅಲ್ಲಲ್ಲಿ ಗಾಯವಾಗಿವೆ. ಸದಾ ಬಾಯಿಯಲ್ಲಿ ನೀರು ಸೋರುತ್ತಿರುತ್ತವೆ. ಇದೀಗ ಬೀದಿ ನಾಯಿಗಳಷ್ಟೇ ಅಲ್ಲ, ಇತ್ತೀಚೆಗೆ ಹಂದಿಗಳ ಹಿಂಡೂ ಪ್ರತ್ಯಕ್ಷವಾಗಿವೆ. ಅವುಗಳಿಗೂ ನಿತ್ಯ ಆಹಾರ ನೀಡಲಾಗುತ್ತಿದೆ. ನಾಯಿಗಳಿಗೆ ಆಹಾರ ನೀಡಬೇಡಿ ಎಂದು ಸ್ಥಳೀಯರು ಹೇಳಿದರೂ ಕೇಳಿಸಿಕೊಳ್ಳದ ಗಿರೀಶ್ ವಿರುದ್ಧ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಗೆ, ಜನಪ್ರತಿನಿಧಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳೀಯರು ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಗಿರೀಶ್ ಯಾರ ಮಾತಿಗೂ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಸ್ಥಳೀಯರು ಇದೀಗ ನೇರವಾಗಿ ಮೇನಕಾ ಗಾಂಧಿ ಅವರಿಗೆ ಇಮೇಲ್ ಮೂಲಕ ಮನವಿ ಮಾಡಿ ಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಭದ್ರಾವತಿಯಲ್ಲಿ ನಾಲ್ಕು ವರ್ಷದ ಬಾಲಕ ನಾಯಿ ಕಡಿತದಿಂದ ಅಸುನೀಗಿದ್ದ. ಶಿವಮೊಗ್ಗದ ಪುರಲೆ ಮತ್ತಿತರ ಪ್ರದೇಶದ ಚಿಕ್ಕಮಕ್ಕಳು ನಾಯಿ ಕಡಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳೂ ನಡೆದಿವೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

ಇತ್ತೀಚಿನ ವರ್ಷಗಳಲ್ಲಿ ನಗರಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಬೀದಿ ನಾಯಿಗಳು ಕಚ್ಚಿದರೆ, ಶ್ವಾನಗಳಿಗೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವವರು ಭರಿಸಬೇಕು. ಜತೆಗೆ ಶ್ವಾನಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನೂ ಅವರೇ ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಕಾಳಜಿಯನ್ನೂ ಮಾಡಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಸೆಪ್ಟೆಂಬರ್ ತಿಂಗಳಲ್ಲಿ ನೀಡಿದ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ | Honeybee attack | ಬೀಚ್‌ನಲ್ಲಿ ಹೆಜ್ಜೇನು ದಾಳಿ ನಡೆಸಿತೆಂದು ಸಮುದ್ರಕ್ಕೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

Exit mobile version