Site icon Vistara News

Shimoga News | ಶಿವಪ್ಪ ನಾಯಕ ಬ್ಯಾರಿಸ್ ಮಾಲ್ ಲೀಸ್ ಪ್ರಕರಣ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಾಗ್ವಾದ, ಧರಣಿ

General Body Meeting of the Corporation Shivappa Nayaka Baris Mall

ಶಿವಮೊಗ್ಗ: ಇಲ್ಲಿನ ಶಿವಪ್ಪ ನಾಯಕ ಬ್ಯಾರಿಸ್ ಮಾಲ್ ಲೀಸ್ ಪ್ರಕರಣ ನಿರೀಕ್ಷೆಯಂತೆ ಗುರುವಾರ (ಡಿ.೧೫) ಮಹಾನಗರ ಪಾಲಿಕೆಯ (Shimoga News) ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆಗೆ ಸಾಕ್ಷಿಯಾಯಿತು.

ಮಾಲ್‌ನ ಫೋಟೊಗೆ ನಕಲಿ ನೋಟುಗಳ ಹಾರ ಹಾಕಿ ಪಾಲಿಕೆ ಸಭೆಯಲ್ಲಿ ವಿಪಕ್ಷಗಳ ಭರ್ಜರಿ ಪ್ರತಿಭಟನೆಯೂ ನಡೆಯಿತು. ವಾಗ್ವಾದ, ಧರಣಿ ನಡೆದು ಕೊನೆಗೆ ನಿಲುವಳಿ ಸೂಚನೆ ಮಂಡಿಸುವಲ್ಲಿ ವಿಪಕ್ಷ ಸದಸ್ಯರು ಯಶಸ್ವಿಯಾದರು. ಆದರೆ ವರದಿ ಕುರಿತ ಚರ್ಚೆಗೆ ಮಾತ್ರ ಅವಕಾಶ ಸಿಗಲಿಲ್ಲ.

ಶಿವಪ್ಪ ನಾಯಕ ಬ್ಯಾರಿಸ್ ಮಾಲ್ ಲೀಸ್‌ ಅವಧಿಯನ್ನು 99 ವರ್ಷ ವಿಸ್ತರಿಸುವ ಕುರಿತ ತನಿಖಾ ವರದಿ ಬಂದರೂ ಅದನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸದೆ ಇರುವ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮಾಲ್ ಅವಧಿಯನ್ನು 99 ವರ್ಷ ವಿಸ್ತರಿಸುವ ವಿಷಯವನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಮೇಯರ್ ಅವರ ಗಮನಕ್ಕೆ ತಾರದೆ ಅಜೆಂಡಾದಲ್ಲಿ ಅಳವಡಿಸಲಾಗಿತ್ತು. ಇದರ ಕುರಿತು ಸಮಿತಿ ರಚಿಸಿ ವರದಿ ರಚಿಸಲಾಗಿತ್ತು. ಸಮಿತಿ ವರದಿ ಸಲ್ಲಿಸಿ 5 ತಿಂಗಳು ಕಳೆದರೂ ಸಭೆಯ ಗಮನಕ್ಕೆ ತಾರದೆ ಡಿಸಿ ಕಚೇರಿಗೆ ಕಳುಹಿಸಿರುವುದೇಕೆ ಎಂದು ವಿಪಕ್ಷಗಳು ಪಟ್ಟು ಹಿಡಿದವು.

ನಂತರ ಆಯುಕ್ತರು ಮಾತನಾಡಿ, ಸಮಿತಿಯ ವರದಿ ಬಂದ ನಂತರ ಅಜೆಂಡಾವನ್ನು ತಯಾರಿಸುವಲ್ಲಿ ಜುಬೇರ್ ಎಂಬ ಕೇಸ್ ವರ್ಕರ್ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಕೇಸ್ ವರ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಡಿಸಿಗೆ ಪತ್ರ ಬರೆದಿರುವೆ ಎಂದು ಸ್ಪಷ್ಟಪಡಿಸಿದರು.

ಸಭಾಂಗಣದ ಬಾವಿಗಿಳಿದು ಧರಣಿ ಕುಳಿತ ಕಾಂಗ್ರೆಸ್ ಸದಸ್ಯರು.

ಈ ಬಗ್ಗೆ ಮತ್ತೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಮುಗಿಬಿದ್ದು ಸಮಗ್ರ ವರದಿ ಸಲ್ಲಿಸಿ, ಕೇಸ್ ವರ್ಕರ್ ಅವರ ಹೇಳಿಕೆ ಓದುವಂತೆ ಒತ್ತಾಯಿಸಿತು. ಮಾಲ್ ಲೀಸ್ ಅವಧಿ ವಿಸ್ತರಿಸಲು ಬಿಜೆಪಿ ಕಿಕ್ ಬ್ಯಾಕ್ ಪಡೆದಿದೆ ಎಂದು ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪ ಮಾಡಿದರು. ಸಭಾಂಗಣದ ಬಾವಿಗಿಳಿದು ಧರಣಿ ಕುಳಿತರು. ಕೊನೆಗೆ ವಿಪಕ್ಷ ಪ್ರತಿಭಟನೆಗೆ ಮಣಿದ ಮೇಯರ್ ವರದಿ ಮಂಡನೆಗೆ ಆದೇಶಿಸಿದರು.

ಇದನ್ನೂ ಓದಿ | Gold Mine | ಕೋಲಾರ ಚಿನ್ನದ ಗಣಿ ಮತ್ತೆ ಶುರು! ಸಂಸ್ಕರಿತ ಅದಿರಿನಿಂದ ಚಿನ್ನ ಹೊರ ತೆಗೆಯುವ ಪ್ಲ್ಯಾನ್, ಎಷ್ಟಿದೆ ಬಂಗಾರ?


ವರದಿ ಮಂಡನೆ ನಂತರವೂ ಸಭೆ ತಹಬಂದಿಗೆ ಬರಲಿಲ್ಲ. ಸಭಾ ಶಾಖೆಯ ಮ್ಯಾನೇಜರ್ 11 ಪುಟಗಳ ವರದಿಯನ್ನು ಓದಿದ ನಂತರ ವಿಪಕ್ಷಗಳು ಕೇಸ್ ವರ್ಕರ್ ಗೆ ಸೂಚನೆ ನೀಡಿರುವ ಬಗ್ಗೆ ಕಾಲ್ ರೆಕಾರ್ಡ್ ಸಮಿತಿಯ ವರದಿಯಲ್ಲಿದೆ. ಅದನ್ನು ಸಭೆಯಲ್ಲಿ ಮಂಡಿಸಬೇಕು. ಅಲ್ಲದೆ ನೋಟ್ ಶೀಟ್ ಎಲ್ಲಿದೆ ಎಂದು ವಿಪಕ್ಷಗಳು ಪ್ರತಿಭಟಿಸಿದರು. ವಿಪಕ್ಷಗಳು ನೋಟ್ ಶೀಟ್, ಕೇಸ್ ವರ್ಕರ್ ಅವರ ಕಾಲ್ ರೆಕಾರ್ಡ್ ನ್ನು ಸಭೆಗೆ ತರಲು ಮತ್ತೆ ಭಾವಿಗೆ ಇಳಿದು ಪ್ರತಿಭಟಿಸಲಾಯಿತು. ಆದರೆ ವಿಪಕ್ಷದ ಈ ಬೇಡಿಕೆಗೆ ಸೊಪ್ಪು ಹಾಕದ ಮೇಯರ್ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದರು. ವಿಪಕ್ಷಗಳ ಕಿಕ್ ಬ್ಯಾಕ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಮೇಯರ್ ಶಿವಕುಮಾರ್, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಸಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪಾಲಿಕೆ ಸಾಮಾನ್ಯ ಸಭೆ ಮುಂದೂಡಿದ ನಂತರ 45 ನಿಮಿಷ ಬಳಿಕ ಪುನಾರಾಂಭವಾಗುತ್ತಿದ್ದಂತೆ ವಿಪಕ್ಷಗಳ ಹಾರಾಟ ಮತ್ತು ಚೀರಾಟ ಕೇವಲ ಎರಡು ನಿಮಿಷದಲ್ಲಿ ತಣ್ಣಗಾಗಿದ್ದು ಆಶ್ಚರ್ಯ ಮೂಡಿಸಿತು. ಮಾಲ್ ಲೀಸ್‌ ನಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಮಾಡಿದ್ದ ವಿಪಕ್ಷಗಳು ಸಭೆ ಸೇರಿ ಕಾಲ್ ರೆಕಾರ್ಡ್ ಮಂಡನೆಯನ್ನು ಮೇಯರ್ ವಿವೇಚನೆಗೆ ಬಿಡುವುದಾಗಿ ಹೇಳಿ ಯೂಟರ್ನ್ ಹೊಡೆದರು. ಆರಂಭದಲ್ಲಿ ವೀರಾವೇಶದಿಂದ ಹೋರಾಡಿದ್ದ ವಿಪಕ್ಷಗಳು ಮತ್ತೆ ಸಭೆ ಆರಂಭವಾಗುವಾಗ ತಣ್ಣಗಾದರು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಡಿಸಿಗೆ ಕಳುಹಿಸಲಾಗಿದೆ. ಕಾಲ್ ರೆಕಾರ್ಡ್ ನ್ನು ಮುಂದಿನ ಸಭೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸ್ಪಷ್ಟೀಕರಣ ಕೊಟ್ಟಾಗ ವಿಪಕ್ಷ ಮೌನವಾಗಿತ್ತು. ನಂತರ ಕಾಲ್ ರೆಕಾರ್ಡ್ ನ್ನು ಸಭೆಗೆ ತರಲು ಮೇಯರ್ ವಿವೇಚನೆಗೆ ತರಲು ವಿಪಕ್ಷಗಳು ಒಪ್ಪಿಕೊಂಡವು. ಇಲ್ಲಿಗೆ ಮಾಲ್ ವಿಷಯಕ್ಕೆ ಇತಿಶ್ರೀ ಹಾಡಲಾಗಿದೆ.


ತಮ್ಮ ಅವಧಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಟಪೂರ್ವ ಮೇಯರ್ ಸುನೀತಾ ಅಣ್ಣಪ್ಪ ಪ್ರತಿಕ್ರಿಯಿಸಿ, ನಮ್ಮ ಗಮನಕ್ಕೆ ತಾರದೆ ವಿಷಯ ಮಂಡನೆಗೆ ಅಳವಡಿಸಿದ್ದನ್ನು ಸ್ವತಃ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂಬುದು ವರದಿಯಲ್ಲೂ ಸ್ಪಷ್ಟವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | JEE Main 2023 | ಸೆಷನ್‌ 1ರ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

Exit mobile version