Site icon Vistara News

ನೆರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

DC selvamni

ಶಿವಮೊಗ್ಗ: ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಅನಾಹುತಗಳು ಮುಂದೆ ಮರುಕಳಿಸದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷದಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅತಿವೃಷ್ಟಿ ಹಾನಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಿವಮೊಗ್ಗ ನಗರದಲ್ಲಿ ಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳಬೇಕು. ಮಳೆಯಿಂದ ಮತ್ತೆ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿರುವ ಸಾಧ್ಯತೆಯಿದ್ದು, ಆದಷ್ಟು ಬೇಗನೆ ತೆರವುಗೊಳಿಸಬೇಕು. ನಗರದಲ್ಲಿ ನೆರೆ ಪರಿಸ್ಥಿತಿ ಎದುರಿಸಲು ವಾರ್ಡ್ ವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಕಾಲುವೆ ಪ್ರದೇಶ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Heavy Rains | ಮಳೆಗೆ ಬೆಳೆ ನಷ್ಟ; ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ಕಟಾವು ನಂತರ ಹಾನಿಗೀಡಾಗಿರುವ ಬೆಳೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಬೇಕು. ಇತ್ತೀಚಿಗೆ ಹಾನಿಗೀಡಾಗಿರುವ ಎಲ್ಲ ಕೆರೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಇದೇ ರೀತಿ ಎಲ್ಲ ಕೆರೆಗಳನ್ನು ಪರಿಶೀಲಿಸಿ, ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ನಗರದಲ್ಲಿ ಹಾದು ಹೋಗಿರುವ ತುಂಗಾ ನಾಲೆಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಗರದಲ್ಲಿ ಸುಮಾರು 4 ಸಾವಿರ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಚಾಲನೆ ನೀಡಲಾಗಿದೆ. ಬೆಳೆ ಹಾನಿ ಕುರಿತು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಪರಿಹಾರವನ್ನು ಆದಷ್ಟು ಬೇಗನೆ ವಿತರಿಸಲಾಗುವುದು. ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಮಾತನಾಡಿ, ಮಳೆಯಿಂದ ತೊಂದರೆಗೆ ಒಳಗಾಗಬಹುದಾದ 93 ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಪರಿಶೀಲಿಸಲು ಹಾಗೂ ಮೆಶ್ ಅಳವಡಿಸಿ ಮೀನುಗಾರಿಕೆ ನಡೆಸುವ ಮೂಲಕ ಕೆರೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾಗಿರುವ ಕ್ರಿಯಾ ಯೋಜನೆಗಳ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ಸಿಲಿಕಿಕೊಂಡ ವಾಹನಗಳು

Exit mobile version