ರಿಪ್ಪನ್‌ಪೇಟೆ: ಮೂರು ಜಾನುವಾರುಗಳು (Cattle) ಮೃತಪಟ್ಟು, ಎರಡು ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ಪಟ್ಟಣದ ಸಮೀಪದ ಕೆರೆ ಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.
ಕೆರೆಹಳ್ಳಿ ಗ್ರಾಮದ ಕೆ.ಬಿ. ಈಶ್ವರ್ ರಾವ್ ಅವರಿಗೆ ಸೇರಿದ್ದ 2 ಎಮ್ಮೆ, ಅನುರಾಜ್ ಎಂಬುವವರಿಗೆ ಸೇರಿದ್ದ 1 ದನ ಮೃತಪಟ್ಟಿದ್ದರೆ, ಕಿರಣ್ ಎಂಬುವವರಿಗೆ ಸೇರಿದ್ದ 2 ದನಗಳು ಗಂಭೀರ ಸ್ಥಿತಿಯಲ್ಲಿ ಕಂಡುಬಂದಿವೆ.
ಏನಿದು ಘಟನೆ?
ಕೆರೆಹಳ್ಳಿ ಗ್ರಾಮದಲ್ಲಿ ಮೇಯಲು ಹೊರಟಿದ್ದ ಕೆಲ ಜಾನುವಾರು ಅಲ್ಲಲ್ಲಿ ಮೃತಪಟ್ಟಿವೆ. ಇನ್ನು ಕೆಲ ಜಾನುವಾರುಗಳು ಹೊಟ್ಟೆ ಉಬ್ಬಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ. ಇದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಆತಂಕಕ್ಕೀಡಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಶು ಇಲಾಖೆ ಪರಿವೀಕ್ಷಕ ರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಾನುವಾರುಗಳಿಗೆ ಅಗತ್ಯ ಔಷಧೋಪಚಾರ ನೀಡಿದ್ದಾರೆ.
ಜಾನುವಾರುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ್ದು, ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು ಕೆಲವರು ಜಮೀನಿನಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕಯುಕ್ತ ಮೇವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Cable Television Network: ಕೇಬಲ್ ಟಿವಿ ನಿಯಮಗಳಿಗೆ ತಿದ್ದುಪಡಿ ಮಾಡಿದ ಪ್ರಸಾರ ಸಚಿವಾಲಯ; ಏನೇನು ಬದಲಾವಣೆ?
ಸಾವಿಗೀಡಾಗಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.