ರಿಪ್ಪನ್‌ಪೇಟೆ: ಹೊಸನಗರ (Hosanagara) ತಾಲೂಕಿನ ಕರಿಮನೆ ಗ್ರಾಮದ ಕನ್ನಳ್ಳಿ ಊರಿನ ಮಧ್ಯೆ ಸರ್ವೆ ನಂ. 106 ರಲ್ಲಿ (ಮಜರೆ ಕನ್ನಳ್ಳಿ) ಗ್ರಾ.ಪಂ. ನಿಂದ ಬೆಳೆಸಿರುವ ಕನಿಷ್ಠ 25 ರಿಂದ 30 ಲಕ್ಷ ಬೆಲೆಬಾಳುವ ಅಕೇಶಿಯಾ ಮರಗಳನ್ನು (Acacia Trees) ಹರಾಜು ಪ್ರಕ್ರಿಯೆ ಇಲ್ಲದೇ ಕಡಿತಲೆ ಮಾಡಿ ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರು ಸೇರಿ ಗ್ರಾಮ ಸಭೆಯನ್ನು ಕರೆಯದೇ ಕಾನೂನು ಬಾಹಿರವಾಗಿ ಗುತ್ತಿಗೆದಾರನಿಗೆ ಕಡಿಮೆ ದರದಲ್ಲಿ ಅಕ್ರಮವಾಗಿ (Illegal Sale) ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನಾ ಧರಣಿ (Protest) ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಿ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Weather Report : ಭಾರಿ ಮಳೆಗೆ ಬಿರುಗಾಳಿ ಸಾಥ್; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಾರ್ವಜನಿಕ ಮಾಹಿತಿ ಪ್ರಕಾರ 8.50 ಲಕ್ಷ ರೂಪಾಯಿಗೆ ಹೊಂದಾಣಿಕೆ ವ್ಯಾಪಾರ ಮಾಡಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ. ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗುತ್ತಿಗೆದಾರ ವ್ಯಕ್ತಿವೊಬ್ಬರಿಗೆ 25 ರಿಂದ 30 ಲಕ್ಷ ಬೆಲೆ ಬಾಳುವ 750 ಕ್ಕೂ ಹೆಚ್ಚು ಮರಗಳನ್ನು ಹೊಂದಾಣಿಕೆ ಮೂಲಕ ಅಕ್ರಮವಾಗಿ ಕಡಿತಲೆ ಮಾಡಲು ಅನುಮತಿ ನೀಡಿ ಗುತ್ತಿಗೆದಾರರಿಂದ 10 ಲಕ್ಷಕ್ಕೂ ಹೆಚ್ಚಿಗೆ ಹಣ ಪಡೆದುಕೊಂಡು ಅಕ್ರಮ ವೆಸಗಿದ್ದಾರೆ,
ಅರಣ್ಯ ಇಲಾಖೆ ಸಹ ಅಕ್ರಮ ಕಡಿತಲೆ ಮಾಡಲು ಗುತ್ತಿಗೆದಾರರಿಗೆ ಸಂಪೂರ್ಣ ಅವಕಾಶ ನೀಡಿದ್ದಾರೆ, ಅರಣ್ಯ ಇಲಾಖೆಗೆ ಮತ್ತು ಸಂಚಾರಿ ದಳಕ್ಕೆ ಸಾರ್ವಜನಿಕರು ದೂರು ನೀಡಿದರು ನ್ಯಾಯ ಸಮ್ಮತವಾಗಿ ಅರಣ್ಯ ಇಲಾಖೆ ವರ್ತಿಸುತ್ತಿಲ್ಲ ಎಂದು ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.