ಕುಂದಾದ್ರಿ (ತೀರ್ಥಹಳ್ಳಿ): ಮಕರ ಸಂಕ್ರಾಂತಿ (Makara Sankranti) ಆಚರಣೆಯಿಂದ ಜೀವನದಲ್ಲಿ ಸರ್ವರಿಗೂ ಒಳ್ಳೆಯ ಫಲ ನೀಡಿ, ರಾಷ್ಟ್ರವನ್ನು ಸಮೃದ್ಧಗೊಳಿಸಲಿ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕೇಂದ್ರವಾಗಿರುವ ಕುಂದಾದ್ರಿ ಕ್ಷೇತ್ರದಲ್ಲಿ ಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ದೀಪೋತ್ಸವ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದ ಶ್ರೀಗಳು, ಪ್ರತಿಯೋರ್ವರೂ ವಿದ್ಯಾಸಂಪನ್ನರಾಗಿ ತಮ್ಮ ಜೀವನದಲ್ಲಿ ಅಹಿಂಸಾತ್ಮಕ ಮನೋಧರ್ಮದ ದಾರಿಯಲ್ಲಿ ಯಶಸ್ಸನ್ನು ಸಾಧಿಸಿ. ಎಳ್ಳು ಬೆಲ್ಲದಂತೆ ಜೀವನ ಬಾಂಧವ್ಯ ಸಾಮರಸ್ಯದಿಂದ ಬೆಸೆಯಲಿ ಎಂದು ಶ್ರೀಗಳು ಹರಸಿದರು.
ಇದನ್ನೂ ಓದಿ: Stock Market: 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ
ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ, ಆಚಾರ್ಯ ಶ್ರೀ ಕುಂದಕುಂದರ ಪಾದಚರಣಗಳಿಗೆ ವಿಶೇಷ ಪೂಜೆ, ಆರಾಧನೆ ಸಮರ್ಪಿಸಿದ ಶ್ರೀಗಳು, ಕುಂದಾದ್ರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಸಂರಕ್ಷಿಸಲು ಸರ್ಕಾರದ, ಸಮಾಜ ಬಾಂಧವರ, ದಾನಿಗಳ ಸಹಕಾರವನ್ನು ಸ್ಮರಿಸಿದರು. ಕ್ಷೇತ್ರದ ಅಭಿವೃದ್ಧಿಯ ವಿವಿಧ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನ ಮಾಡುವ ವಿಚಾರವನ್ನು ಶ್ರೀಗಳವರು ತಿಳಿಸಿದರು.
ಜಿನಭಜನೆ, ಫಲಪುಷ್ಪಾಲಂಕಾರದಿಂದ ಪೂಜೆ ನೆರವೇರಿದವು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು. ರಾತ್ರಿ ಲಕ್ಷದೀಪೋತ್ಸವನ್ನು ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Most Ducks : ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿ ಇಲ್ಲಿದೆ
ಈ ವೇಳೆ ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ತೀರ್ಥಹಳ್ಳಿಯ ಖ್ಯಾತ ಆಯುರ್ವೇದ ವೈದ್ಯ ಡಾ. ಜೀವಂಧರ್ ಜೈನ, ಶೃಂಗೇರಿಯ ಡಾ. ನಿರಂಜನ್, ಧರಣೇಂದ್ರ ಮಲೆನಾಡು ಜೈನ ಮಿಲನ್ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.