Site icon Vistara News

Shivamogga News: ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಕ್ಕೆ ಬಿಜೆಪಿ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಒತ್ತಾಯ

BJP leader Dr H E jnanesh pressmeet at soraba

ಸೊರಬ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ (Public Hospital) ವೈದ್ಯರ (Doctors) ಕೊರತೆಯಿಂದ ಗ್ರಾಮೀಣ ಪ್ರದೇಶದ ರೋಗಿಗಳು ಪರದಾಡುವಂತಾಗಿದ್ದು, ಸರ್ಕಾರ (Government) ಕೂಡಲೇ ವೈದ್ಯರನ್ನು ನೇಮಕ ಮಾಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ 250 ವರೆಗೆ ಇದ್ದ ಒಳರೋಗಿಗಳ ಸಂಖ್ಯೆ 600ರವರೆಗೆ ತಲುಪಿದೆ. ಆಸ್ಪತ್ರೆಯಲ್ಲಿ 14 ವೈದ್ಯರ ಪೈಕಿ ಕೇವಲ ಮೂರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಕೇಂದ್ರದಲ್ಲಿ ವೈದ್ಯರ ಕೊರತೆ ಇರುವುದು ದುರಂತದ ವಿಷಯ. ಅನೇಕ ತಜ್ಞ ವೈದ್ಯರೇ ಇಲ್ಲ. ಇರುವ ವೈದ್ಯರಿಗೂ ಕರ್ತವ್ಯದ ಒತ್ತಡವಾಗುತ್ತಿದ್ದು ಈ ನಿಟ್ಟಿನಲ್ಲಿ ವರ್ಗಾವಣೆ ಬಯಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಆರೋಪಿಸಿದರು.

ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಿಂದ ತೆರಳಿ ವೈದ್ಯಕೀಯ ಶಿಕ್ಷಣ ಪಡೆದವರು ಉತ್ತಮ ವೇತನಕ್ಕಾಗಿ ಮಹಾನಗರಗಳು ಹಾಗೂ ವಿದೇಶಗಳಿಗೆ ತೆರಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅವರನ್ನು ಗ್ರಾಮೀಣ ಪ್ರದೇಶದತ್ತ ಸೆಳೆಯುವ ಯತ್ನವಾಗಬೇಕು.

ಇದನ್ನೂ ಓದಿ: Karnataka Weather : ನಾಳೆ ಬೆಂಗಳೂರಲ್ಲಿ ಜೋರು ಮಳೆ; ಕರಾವಳಿಗೂ ಅಲರ್ಟ್‌

ಸರ್ಕಾರದ ಮಟ್ಟದಲ್ಲಿ ಶಾಸನ ಸಭೆಯಲ್ಲಿ ಚರ್ಚಿಸಿ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಅರ್ಹ ವೇತನ ನೀಡುವ ವ್ಯವಸ್ಥೆಯಾಗಬೇಕು. ವಸತಿ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಕೇವಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರವಲ್ಲ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆಯನ್ನು ಕಾಣುತ್ತಿದ್ದೇವೆ. ತಾಲೂಕಿನ 16 ಪ್ರಾಥಮಿಕ ಚಿಕಿತ್ಸಾಲಯಗಳಲ್ಲಿ ಏಳು ವೈದ್ಯರ ಕೊರತೆ ಇದೆ. ಆನವಟ್ಟಿಯ ಆಸ್ಪತ್ರೆಯಲ್ಲಿ 6 ವೈದ್ಯರು ಇರಬೇಕಿದ್ದು, ಕೇವಲ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯ 90 ಹುದ್ದೆಗಳ ಪೈಕಿ 60 ಹುದ್ದೆಗಳು ಖಾಲಿ ಇದೆ. ವೈದ್ಯರ ಕೊರತೆ ನೀಗಿಸಿ ಜನತೆಗೆ ಆರೋಗ್ಯ ಸೌಲಭ್ಯ ಒದಗಿಸುವತ್ತ ಸರ್ಕಾರ ಗಮನ ನೀಡಬೇಕು. ಜತೆಗೆ ಕ್ಷೇತ್ರದ ಜನಪ್ರತಿನಿಧಿಗಳು ಸದನದಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕೊರತೆ ಕುರಿತು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: World Vision Day 2023: ಕಣ್ಣಿನ ಮೇಲಾಗುವ ಹಾನಿ ತಪ್ಪಿಸಲು ಮೊಬೈಲ್‌ ಫೋನ್‌ ಬಳಸುವಾಗ ಈ ಟಿಪ್ಸ್‌ ಫಾಲೋ ಮಾಡಿ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ಈಶ್ವರಪ್ಪ ಚನ್ನಪಟ್ಟಣ, ಪ್ರಮುಖರಾದ ಪರಮೇಶ್ವರ ಮಣ್ಣತ್ತಿ, ಶರತ್‍ಗೌಡ, ಎಸ್.ಆರ್. ಶಿವಾನಂದ, ಯಶೋಧರಾ ಉಪಸ್ಥಿತರಿದ್ದರು.

Exit mobile version