ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ (Shivamogga News) ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಅವರಣದಲ್ಲಿ ಜೇನುನೊಣಗಳು ದಾಳಿ ಮಾಡಿವೆ. ಇದರಿಂದಾಗಿ ಸುಮಾರು 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಇಂದು ಬೆಳಗ್ಗೆ ಜೇನುಹುಳುಗಳು ದಾಳಿ ಮಾಡಿದ್ದರಿಂದ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿರದಿದ್ದರೂ, ಅವರಲ್ಲಿ ಹಲವರಿಗೆ ಜೇನುನೊಣಗಳು ಕುಟುಕಿದ ಜಾಗದ ಸುತ್ತಲೂ ಭಾರಿ ಊತ ಕಂಡುಬಂದಿದೆ.
ಇದನ್ನೂ ಓದಿ: Shivamogga News: ರಿಪ್ಪನ್‌ಪೇಟೆಯಲ್ಲಿ ಈದ್ ಉಲ್ ಫಿತರ್ ಆಚರಣೆ ಸಂಭ್ರಮ!
ಕಳೆದೊಂದು ತಿಂಗಳಿನಿಂದ ಕಾಲೇಜಿಗೆ ರಜೆ ನೀಡಲಾಗಿತ್ತು. ಇಂದು ಎಲ್ಲಾ ತರಗತಿಗಳು ಏಕಕಾಲದಲ್ಲಿ ಆರಂಭವಾಗಿತ್ತು. ತರಗತಿಗಳು ಪ್ರಾರಂಭವಾಗುತಿದ್ದಂತೆ ಗಾಬರಿಗೊಂಡಿರುವ ಜೇನುನೊಣಗಳು ಏಕಾಏಕಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ.
ಈ ಕಾಲೇಜಿನಲ್ಲಿ 850ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಎರಡನೇ ಮಹಡಿಯಲ್ಲಿ ಕಳೆದ ಐದಾರು ವರ್ಷಗಳಿಂದ ಜೇನು ನೊಣಗಳು ಗೂಡು ಕಟ್ಟಿಕೊಂಡಿವೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಜೇನು ನೊಣಗಳನ್ನು ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದೆ. ಹೀಗಿರುವಾಗ ವಿದ್ಯಾರ್ಥಿಗಳು ಪ್ರತಿನಿತ್ಯ ಆತಂಕದಲ್ಲೇ ಎರಡನೇ ಮಹಡಿಯಲ್ಲಿ ಓಡಾಡುತಿದ್ದಾರೆ. ಈ ಬಗ್ಗೆ ಕಾಲೇಜಿನ ಸಿಬ್ಬಂದಿಗಳಾಗಲಿ, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಆಡಳಿತ ಮಂಡಳಿಯವರಾಗಲಿ ತಲೆಕೆಡಿಸಿಕೊಳ್ಳದೇ ಕುಳಿತಿದ್ದೇ ಇಂದಿನ ಈ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಯೊಬ್ಬ ತನ್ನ ಅಳಲನ್ನು ಮಾಧ್ಯಮದ ಎದುರು ತೋಡಿಕೊಂಡಿದ್ದಾನೆ. ಇನ್ನಾದರೂ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಜೇನುನೊಣಗಳನ್ನು ತೆರವುಗೊಳಿಸಲಿ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.