ಸೊರಬ: ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Temple) ಭರತ ಹುಣ್ಣಿಮೆಯ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ, ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ (Shivamogga News) ಸಲ್ಲಿಸಿದರು.
ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು. ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: KAS Recruitment 2024: ಕೆಎಎಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 384 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಭಕ್ತರು ಸ್ಥಳದಲ್ಲೇ ಒಲೆ ಹೂಡಿ ಕರಿದ ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿ ರೇಣುಕಾಂಬೆಗೆ ನ್ಯೆವೇದ್ಯ ಅರ್ಪಿಸಿದರು. ನಂತರ ತಮ್ಮ ಬಂಧು ಬಳಗದವರ ಜತೆ ಸಾಮೂಹಿಕ ಭೋಜನ ಮಾಡಿದರು. ಸಂಜೆ ವೇಳೆಗೆ ದೇವಸ್ಥಾನದಿಂದ ಆರಂಭವಾದ ಶ್ರೀದೇವಿಯ ಪಲ್ಲಕ್ಕಿ ಉತ್ಸವ ಮಂಗಳಾರತಿ ಕಟ್ಟೆ, ರಥ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ: Money Guide: ಮನೆ ಖರೀದಿಗೆ ಮುಂದಾಗಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇ ಬೇಕು
ಈ ವೇಳೆ ಶ್ರೀ ರೇಣುಕಾಂಬ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಮಾತನಾಡಿ, ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಕ್ರಮ ವಹಿಸಲಾಗಿದೆ. ಟ್ಯಾಂಕರ್ ಮತ್ತು ಕೊಳವೆ ಬಾವಿ ಮೂಲಕ ಕುಡಿಯುವ ನೀಡಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇವಸ್ಥಾನದ ಆವರಣದಲ್ಲಿರುವ ಮಳಿಗೆಗಳನ್ನು ಫೆ. 29ರಂದು ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.