ರಿಪ್ಪನ್‌ಪೇಟೆ: ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ (Roads) ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ (Central Government) ಪಿಎಂಜಿಎಸ್‌ವೈ ಯೋಜನೆಯ ಮೂಲಕ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 200 ಕಿ.ಮೀ ರಸ್ತೆಗೆ 200 ಕೋಟಿ ರೂ ಅನುದಾನವನ್ನು ತರುವುದರ ಮೂಲಕ ಗ್ರಾಮೀಣ ಪ್ರದೇಶದ (Rural Area) ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿಪುರ ಕಗ್ಗಲಿಜಡ್ಡು ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಪಿಎಂಜಿಎಸ್‌ವೈ ಯೋಜನೆಯಡಿ 3.48 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಅವರು ಮಾತನಾಡಿದರು.
ಜಲಜೀವನ ಯೋಜನೆಯಡಿ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಜಿಲ್ಲೆಯ 5 ಲಕ್ಷ ಮನೆಗಳಲ್ಲಿ ಈಗಾಗಲೇ 2 ಲಕ್ಷ ಮನೆಗಳಿಗೆ ಈ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆಯುಷ್ಮಾನ್ ಕಾರ್ಡ್‌ನಿಂದಾಗಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 5 ಲಕ್ಷ ರೂ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 2 ಲಕ್ಷ ರೂ ಈ ಯೋಜನೆಯನ್ವಯ ಜಿಲ್ಲೆಯ 174 ಕೋಟಿ ರೂ ವೆಚ್ಚದಲ್ಲಿ ಬಡಕುಟುಂಬದವರು ಆರೋಗ್ಯದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ರೈತರ ನೆರವಿಗೆ ಧಾವಿಸಿದ ಕೇಂದ್ರ! ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳಿಗೆ 22,303 ಕೋಟಿ ರೂ. ಸಬ್ಸಿಡಿ!
ಹೊಸನಗರ ತಾಲೂಕಿಗೆ ಈಗಾಗಲೇ 44 ಬಿಎಸ್‌ಎನ್ಎಲ್ ಟವರ್‌ಗಳನ್ನು ಮಂಜೂರು ಮಾಡಿಸಲಾಗಿದ್ದು ಸದ್ಯದಲ್ಲಿಯೇ ಟವರ್ ನಿರ್ಮಾಣ ಕಾಮಗಾರಿ ಅರಂಭವಾಗಲಿದೆ ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಯ ಫಲ ಪಡೆಯಲು ಅಭಿವೃದ್ಧಿ ತ್ಯಾಗ
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಫಲ ಪಡೆಯಲು ಅಭಿವೃದ್ಧಿ ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ, ಸಕಾಲದಲ್ಲಿ ಮಳೆಬಾರದೇ ಹಾಕಿದ ಬೆಳೆಗಳು ಒಣಗುತ್ತಿದ್ದು, ಮಲೆನಾಡು ಸಂಪೂರ್ಣವಾಗಿ ಬರಗಾಲ ಪ್ರದೇಶವಾಗಿದೆ,
ಇನ್ನು ನವಂಬರ್-ಡಿಸೆಂಬರ್ ಅಂತ್ಯದಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಿಸುವಂತಾಗಿದ್ದು, ವಿದ್ಯುತ್ ಸಮಸ್ಯೆ ಸಹ ಕಾಣುವಂತಾಗಿದೆ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವರಾಗಿದ್ದು ಅವರೇ ಅಭಿವೃದ್ದಿಗೆ ಹಣವಿಲ್ಲ ಎನ್ನುತ್ತಿದ್ದಾರೆ ಹಾಗಾದರೆ ಮುಂದೆ ಏನು ಎಂಬ ಚಿಂತೆ ಕಾಡುವಂತಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Tiger Nail : ಹುಲಿ ಉಗುರು ಪತ್ತೆಯಾದರೆ ಏನು ಮಾಡೋಣ? ಶಿಫಾರಸು ಮಾಡಲು ಸಮಿತಿ ರಚನೆ
ಈ ವೇಳೆ ಹೆದ್ದಾರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನಂತಿ ರಾಘವೇಂದ್ರ, ಉಪಾಧ್ಯಕ್ಷೆ ವನಿತಾ ಗಂಗಾಧರ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನ, ಸುಮಿತ್ರಮ್ಮ, ವಿಶುಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬೆಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್, ನಾಗೇದ್ರ ಕಲ್ಲೂರು, ಲಿಂಗಪ್ಪ ಕಗ್ಗಲಿ ಸೇರಿದಂತೆ ಇನ್ನಿತರರಿದ್ದರು.