Site icon Vistara News

Shivamogga News: ಬಿಲ್ಲೇಶ್ವರದಲ್ಲಿ ಅದ್ಧೂರಿಯಾಗಿ ಜರುಗಿದ ಅರ್ಧನಾರೀಶ್ವರ ದೇವರ ಪ್ರತಿಷ್ಠಾಪನೆ

#image_title

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಹುಂಚ ಹೋಬಳಿಯ ಬಿಲ್ಲೇಶ್ವರ ಗ್ರಾಮದ (Shivamogga News) ಬಿಲ್ಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಅರ್ಧನಾರೀಶ್ವರ ದೇವರ ಪ್ರತಿಷ್ಠಾಪನಾ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುಗಣಾದಿಪತಿ ಪೂಜೆ, ಪುಣ್ಯಾಹ, ಬ್ರಹ್ಮಕೂರ್ಚಹವನ, ನಾಂದಿ ಅಗ್ನಿಗ್ರಹಣ, ಯಾಗಶಾಲಾ ಪ್ರವೇಶ, ಕುಂಡಮಂಟಪ ಆಲಯಸಂಸ್ಕಾರ, ಗಣಪತಿ ಪೂಜೆ, ಋತ್ವಿಗ್‌ ಅವರಣ, ಆದಿವಾಸ ಪೂಜೆ, ಆಗ್ನಿಜನನ, ವಾಸ್ತು, ಭೂಶುದ್ಧ ರತ್ನನ್ಯಾಯಸ, ಸೃಷ್ಠಿನ್ಯಾಸಪೂರ್ವಕ ಅದಿವಾಸಹವನ, ಬೇರಿತಾಳನ ಬಲಿ, ಬೇರಿತಾಳನ ದಿಗ್ಬಲಿ, ಗಣಪತಿ ಪೂಜೆ ಪುಣ್ಯಾಹ, ಪ್ರತಿಷ್ಠಾಂಗ ಹವನ, ಪ್ರಾಣಪ್ರತಿಷ್ಠೆ, ನೇತ್ರೋನ್ಮಿಲನ, ಜೀವಕುಂಭಾಭಿಷೇಕ, ನಿರೀಕ್ಷೆ, ಕಲಾತತ್ವ ಹವನ, ಶಕ್ತಿಹವನ, ಶಾಂತಿ ಹವನ, ಪೂರ್ಣಾಹುತಿ, ಮಹಾಬಲಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇನ್ನಿತರ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ಜರುಗಿದವು.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

ಕಾರ್ಯಕ್ರಮದಲ್ಲಿ ಮಳಲಿ ಮಠದ ಷ.ಬ್ರ.ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. “ದೇವಾಲಯಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ ಕರುಣಿಸುವ ಧಾರ್ಮಿಕ ಕೇಂದ್ರಗಳಾಗಿವೆ. ಕಷ್ಟಕಾರ್ಪಣ್ಯಗಳು ಬದುಕಿನಲ್ಲಿ ಎದುರಾದಾಗ ಅವುಗಳನ್ನು ಪರಿಹರಿಸಿಕೊಳ್ಳಲು ದೇವಸ್ಥಾನ ಮಠ ಮಂದಿರಗಳಿಗೆ ಹೋಗುವ ಮೂಲಕ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ. ಮನೆಯಲ್ಲಿದ್ದರೆ ನೆಮ್ಮದಿ ದೊರೆಯದು. ದುಡಿಮೆಯ ಅಲ್ಪ ಹಣವನ್ನು ದೇವರ ಹೆಸರಿನಲ್ಲಿ ದಾನ ಧರ್ಮ ಮಾಡಿದಾಗ ಬದುಕು ಸಾರ್ಥಕವಾಗುವುದು” ಎಂದು ಅವರು ಹೇಳಿದರು.

ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮಿಗಳು ಆಶೀರ್ವಚನ ನೀಡಿ, “ಸ್ವಾರ್ಥದ ಬದುಕಿಗಿಂತ ಸಾರ್ವಜನಿಕ ಬದುಕಿಗೆ ಒತ್ತು ನೀಡಿದಾಗ ದೇವರ ಪ್ರೇರಣೆ ನಮಗೆ ದೊರೆಯುತ್ತದೆ. ಭಗವಂತ ನೀಡಿದ ಅವಕಾಶವನ್ನು ನಿಸ್ವಾರ್ಥ ಸೇವೆಯಿಂದ ಮಾಡಿದಾಗ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ” ಎಂದರು.

ಇದನ್ನೂ ಓದಿ: Actor Suriya: `ಕಂಗುವ’ ಸಿನಿಮಾದಿಂದ ಹೊಸ ಅಪ್‌ಡೇಟ್‌: ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್‌?

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಬಿಲ್ಲೇಶ್ವರಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಂ. ಪರಮೇಶ್ವರ ಶೆಟ್ಟಿಬೈಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೊಸಗುಂದ ಉಮಾಮಹೇಶ್ವರಿ ದೇವಸ್ಥಾನದ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎಂ.ಎನ್. ಶಾಸ್ತ್ರಿ, ಕೆಂಜಿಗಾಪುರದ ವಿದ್ವಾನ್ ಶ್ರೀಧರ ಭಟ್ಟರು ಭಾಗವಹಿಸಿದ್ದರು. ಹಾಗೆಯೇ ದೇವಸ್ಥಾನ ಸೇವಾ ಸಮಿತಿಯವರು, ಊರಿನ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

Exit mobile version