Site icon Vistara News

Shivamogga News: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

BJP protests against the failure of the state Congress government at Soraba

ಸೊರಬ: ಬಿಜೆಪಿ (BJP government) ಸರ್ಕಾರ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಕೈಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Congress government) ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಆಡಳಿತದಲ್ಲಿ ವೈಫಲ್ಯ ಅನುಭವಿಸುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಆರೋಪಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹೊಂದಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿಯೇ ಆಡಳಿತ ವೈಫಲ್ಯ ಅನುಭವಿಸುತ್ತಿದೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾ ಕೋಟ್ಯಂತರ ರೂ., ಜಾಹೀರಾತುಗಳಿಗೆ ವಿನಿಯೋಗ ಮಾಡುತ್ತಿದ್ದಾರೆಯೇ ವಿನಃ, ರೈತರ ಪರವಾಗಿಲ್ಲ. ರಾಜ್ಯದಿಂದ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ., ಗಳ ಕಿಸಾನ್‌ ಸಮ್ಮಾನ್ ಯೋಜನೆ, ರೈತರ ವಿದ್ಯಾನಿಧಿ ಯೋಜನೆ, ಭೂಸಿರಿ ಯೋಜನೆ, ಶ್ರಮಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಜಿಲ್ಲೆಗೊಂದು ಗೋಶಾಲೆಯಂತಯ ಯೋಜನೆಗಳನ್ನು ಕೈಬಿಟ್ಟು ಜನ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದರು.

ಇದನ್ನೂ ಓದಿ: ICC World Cup: ವಿಶ್ವಕಪ್​ಗೆ ಅಂಪೈರ್​ಗಳ ನೇಮಕ; ನಿತಿನ್​ ಮೆನನ್​ಗೆ ಅವಕಾಶ

ಮುಂಗಾರು ವೈಫಲ್ಯವಾಗಿ ಕೇವಲ ಎರಡು ತಿಂಗಳಿನಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಕೃಷಿ ಸಚಿವರು ಈ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ರೈತರ ಬಗ್ಗೆ ನಿರ್ಲಕ್ಷ್ಯತನ ಎದ್ದು ತೋರಿಸಿದ್ದಾರೆ. ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇರುವ ಹಿನ್ನೆಲೆಯಲ್ಲಿ ಭತ್ತ ಹಾಗೂ ಜೋಳದ ಬೆಳೆಗಳು ಒಣಗಿ ಹೋಗಿವೆ. ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ವಿದ್ಯುತ್ ಕೊರತೆ ಎದುರಿಸುವಂತಾಗಿದೆ. ರೈತರ ಆತ್ಮಹತ್ಯೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ರೈತರಲ್ಲಿ ಧೈರ್ಯ ತುಂಬುವ ಹಾಗೂ ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ. ರಾಜು ಎಂ. ತಲ್ಲೂರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕ್ಷೇತ್ರದ ಶಾಸಕರು ತಾಲೂಕಿನ ಬಗ್ಗೆ ಗಮನ ನೀಡುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರೂ., ಅನುದಾನವನ್ನು ಕ್ಷೇತ್ರಕ್ಕೆ ನೀಡಲಾಗಿತ್ತು. ಆದರೆ, ಈಗಿನ ಶಾಸಕರು ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಪಠ್ಯ ಪುಸ್ತಕಗಳಲ್ಲಿನ ದೇಶ ಭಕ್ತರ ಹೆಸರುಗಳನ್ನು ತೆಗೆದು ಹಾಕುವ ಜತೆಗೆ ಕಿತ್ತೊಗೆದಿದ್ದೇವೆ ಎನ್ನುವುದು ಅವರ ಜ್ಞಾನದ ಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದರು.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಗೆ ಬರುವ ವಿಶ್ವ ನಾಯಕರನ್ನು ಲೈವ್‌ ಆಗಿ ಇಲ್ಲಿ ನೋಡಿ!

ಯುವ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದೆ ಬೆಳೆಗಳು ಒಣಗುತ್ತಿವೆ. ಇತ್ತ ಮಳೆಯೂ ಇಲ್ಲ. ಮತ್ತೊಂದೆಡೆ ವಿದ್ಯುತ್ ಇಲ್ಲದೆ ಶುಂಠಿ ಸೇರಿದಂತೆ ಯಾವುದೇ ಬೆಳೆಗಳಿಗೂ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ. ರೈತರನ್ನು ಚಿಂತೆಗೀಡು ಮಾಡುವಂತಾಗಿದೆ. ಕೂಡಲೇ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ಬೆಳೆ ಪರಿಹಾರವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: Viral Video: ಮೂರು ಹೆಬ್ಬಾವುಗಳನ್ನು ಹಿಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ದೇವೇಂದ್ರಪ್ಪ ಚನ್ನಾಪುರ, ಈಶ್ವರ ಚನ್ನಪಟ್ಟಣ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ಯು. ನಟರಾಜ್, ಪ್ರಮುಖರಾದ ಮಣ್ಣತ್ತಿ ಪರಮೇಶ್, ಗುರುಕುಮಾರ ಪಾಟೀಲ್, ನಾಗರಾಜ ಬರಗಿ, ಎಂ.ಕೆ. ಯೋಗೇಶ್, ಗುರುಮೂರ್ತಿ, ವಸಂಧುರಾಭಟ್, ಮೀನಾಕ್ಷಿ ಹೆಗಡೆ, ಡಿ. ಶಿವಯೋಗಿ, ಅಶೋಕ್ ಶೇಟ್, ಆಶೀಕ್ ನಾಗಪ್ಪ, ಸುರೇಶ್ ಉದ್ರಿ, ಆರ್. ಮನವೇಲ್, ಸುಭಾಷ್, ವಿನಾಯಕ ತವನಂದಿ, ಕೆ.ಜಿ. ಬಸವರಾಜ್ ಸೇರಿದಂತೆ ಮತ್ತಿತರರಿದ್ದರು.

Exit mobile version