ಸೊರಬ: ರಾಜ್ಯದಲ್ಲಿ ಈಡಿಗ ಸಮಾಜವನ್ನು (ediga community) ಮುನ್ನೆಲೆಗೆ ತರುವಲ್ಲಿ ಅನೇಕ ನಾಯಕರ (Leaders) ಕೊಡುಗೆ ಮತ್ತು ಹೋರಾಟಗಳಿವೆ. ಆದರೆ, ಅರೆಮಲ್ಲಾಪುರದ ಶ್ರೀ ಪ್ರಣವಾನಂದ ಸ್ವಾಮೀಜಿ ಸಮಾಜದ ನಾಯಕರ ವಿರುದ್ಧ ನೀಡಿರುವ ಹೇಳಿಕೆಗೆ ಬಿಎಸ್‌ಎನ್‌ಡಿಪಿ ಸಂಘಟನೆ ಜಿಲ್ಲಾಧ್ಯಕ್ಷ ಕಲ್ಲಪ್ಪ ಚಿತ್ರಟ್ಟೆಹಳ್ಳಿ ಖಂಡನೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಡಿಗ ಸಮಾಜಕ್ಕೆ ಪೀಠ ಹಾಗೂ ಸ್ವಾಮೀಜಿಗಳು ಇಲ್ಲದಂತಹ ಸಂದರ್ಭದಲ್ಲಿಯೇ ರಾಜ್ಯಕ್ಕೆ ಎಸ್. ಬಂಗಾರಪ್ಪ ಅವರಂತಹ ಮುಖ್ಯಮಂತ್ರಿಯನ್ನು ಕೊಡುಗೆಯಾಗಿ ನೀಡಿದ್ದೇವೆ. ಕಾಗೋಡು ತಿಮ್ಮಪ್ಪ ಮತ್ತು ಮಧು ಬಂಗಾರಪ್ಪ ಸೇರಿದಂತೆ ಅನೇಕ ನಾಯಕರ ಹೋರಾಟಗಳಿಂದ ಈಡಿಗ ಸಮಾಜ ಸ್ವಾಭಿಮಾನಿ ಬದುಕು ಕಂಡುಕೊಂಡಿದೆ. ಇಂತಹ ನಾಯಕರ ವಿರುದ್ಧವಾಗಿ ಹೇಳಿಕೆ ನೀಡುವಾಗ ಪ್ರಣವಾನಂದ ಶ್ರೀಗಳು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಮಧು ಬಂಗಾರಪ್ಪ ಅವರು ರೈತರ ಪರವಾಗಿ ಪಾದಯಾತ್ರೆಯಂತಹ ಹೋರಾಟ ನಡೆಸಿದರು. ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಅವರಂತಹ ನಾಯಕರು ಉಳುವ ರೈತರಿಗೆ ಭೂಮಿಯ ಹಕ್ಕನ್ನು ಕೊಡಿಸಿದರು. ಅಂತಹ ನಾಯಕರನ್ನು ನೋಡಿ ಪ್ರಣವಾನಂದ ಸ್ವಾಮೀಜಿ ಅರಿಯಬೇಕೇ ವಿನಃ, ಇಂತಹ ಸ್ವಾಮೀಜಿಗಳಿಂದ ಸಮಾಜಕ್ಕೆ ತಿಳಿಯುವ ವಿಚಾರವಿಲ್ಲ. ಕಳೆದ ಮೂರು ವರ್ಷಗಳಿಂದ ಸ್ವಯಂ ಘೋಷಿತ ಈಡಿಗ ಸಮಾಜದ ಸ್ವಾಮೀಜಿ ಎಂದು ಬಿಂಬಿಸಿಕೊಳ್ಳುವ ಯತ್ನದಲ್ಲಿ ಮತ್ತು ಆತುರದಲ್ಲಿ ಸಮಾಜದ ನಾಯಕರ ವಿರುದ್ಧವೇ ಹೇಳಿಕೆ ನೀಡುವುದನ್ನು ಸಮಾಜವು ಸಹಿಸುವುದಿಲ್ಲ. ಇಂತಹ ಸ್ವಾಮೀಜಿಯಿಂದ ಒಗ್ಗಟ್ಟಿನಿಂದ ಇರುವ ಈಡಿಗ ಸಮಾಜದಲ್ಲಿ ಒಡಕು ಮೂಡಿಸುವ ದುಷ್ಕೃತ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Krishna ByreGowda : ಅಕ್ಟೋಬರ್ 1ರಿಂದ ಶೇ. 30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ!
ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಸದನದಲ್ಲಿ ಪ್ರಸ್ತಾಪ ಮಾಡಿದವರು ಮಧು ಬಂಗಾರಪ್ಪ ನವರು. ಜತೆಗೆ ತಾಲೂಕಿನಲ್ಲಿ ಸಮಾಜದ ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆ ನಡೆಸಲು 4 ಎಕರೆ ನಿವೇಶನವನ್ನು ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಸಮಾಜದ ಸ್ವಾಮೀಜಿ ಎಂದು ಕೆಲ ದಿನಗಳಿಂದ ಬಿಂಬಿಸಿಕೊಳ್ಳುತ್ತಿರುವ ಪ್ರಣವಾನಂದ ಸ್ವಾಮೀಜಿ ಅವರಿಂದ ಸಮಾಜಕ್ಕೆ ಕೊಡುಗೆ ಏನು ಪ್ರಶ್ನಿಸಿದ ಅವರು, ಬಿ.ಕೆ. ಹರಿಪ್ರಸಾದ್ ಅವರಿಗೆ ನ್ಯಾಯ ಕೊಡಿಸಲು ಸಮಾಜ ಅವರ ಜತೆಗೆ ಇದೆ. ಇನ್ನು ಅವರ ಪಕ್ಷದ ಹೈಕಮಾಂಡ್ ಇದೆ. ಈ ನಡುವೆ ಸಮಾಜದಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕುವಂತಹ ಹೇಳಿಕೆಗಳು ಸಲ್ಲದು ಎಂದು ಹೇಳಿದರು.
ಇತರೆ ಸಮಾಜದ ಗೌರವಾನ್ವಿತ ಸ್ವಾಮೀಜಿಗಳ ಎದುರು ಈಡಿಗ ಸಮಾಜವು ಇರಿಸುಮುರಿಸು ಅನುಭವಿಸುವಂತಾಗಿದೆ. ಹೇಳಿಕೆಗಳನ್ನು ನೀಡುವಾಗ ಪ್ರಣಾವಾನಂದ ಸ್ವಾಮೀಜಿ ಅವರು ರಾಜ್ಯದ ಇತಿಹಾಸ ಮತ್ತು ಈಡಿಗ ಸಮಾಜ ನಾಯಕರ ಹೋರಾಟದ ಜತೆಗೆ ಸಂಸ್ಕೃತಿ ಸಂಸ್ಕಾರಗಳನ್ನು ಮೊದಲು ಅರಿಯಬೇಕು. ಇಲ್ಲವಾದಲ್ಲಿ ಸಮಾಜದ ವಿವಿಧ ಸಂಘಟನೆಗಳ ಜತೆಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ಸುದ್ದಿಗೋಷ್ಠಿಯಲ್ಲಿ ಬಿಎಸ್‌ಎನ್‌ಡಿಪಿ ಜಿಲ್ಲಾ ಉಪಾಧ್ಯಕ್ಷ ತ್ಯಾಗರಾಜ್, ಪ್ರಮುಖರಾದ ಪರಸಪ್ಪ, ಬಂಗಾರಪ್ಪ ಕೆರೆಕೊಪ್ಪ, ಲಕ್ಷ್ಮಣಪ್ಪ, ಚಂದ್ರಪ್ಪ ಓಟೂರು ಸೇರಿದಂತೆ ಇತರರಿದ್ದರು.