ಸಾಗರ: “ಬಿಜೆಪಿಯಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿದವರಿಗೆ ಬೆಲೆ ಇಲ್ಲ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷ್ಠೆಯಿಂದ ಪಕ್ಷ ಕಟ್ಟಿ ಅಧಿಕಾರ ತರುವ ತನಕ ಶ್ರಮಿಸಿದ್ದ ಚೇತನರಾಜ್ ಕಣ್ಣೂರ್‌ರಂತಹ ಯುವ ನಾಯಕರನ್ನು ಮೂಲೆಗುಂಪು ಮಾಡಿರುವುದು ಬಿಜೆಪಿ ಅವನತಿಗೆ ಕಾರಣವಾಗುತ್ತದೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಚೇತನರಾಜ್ ಕಣ್ಣೂರು ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
“ಹಾಲಪ್ಪ ಶಾಸಕರಾಗಿ ನಡೆಸಿದ ದೌರ್ಜನ್ಯ, ದರ್ಪದ ಕುರಿತು ಮುಂದಿನ ದಿನಗಳಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಬಂದವರು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಬರುವವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ. ಎಲ್ಲರೂ ಒಟ್ಟಾಗಿ ಸೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಂಘಟಿತರಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಎಲ್ಲ ರೀತಿಯ ಗೌರವ ಪಕ್ಷದಲ್ಲಿ ಸಿಗಲಿದೆ. ಚೇತನರಾಜ್ ಕಣ್ಣೂರು ಮತ್ತು ಸಂಗಡಿಗರು ಕಾಂಗ್ರೆಸ್ ಸೇರಿರುವುದರಿಂದ ಪಕ್ಷದ ಬಲ ಇನ್ನಷ್ಟು ಹೆಚ್ಚಿದೆ” ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, “ಚೇತನರಾಜ್ ಒಬ್ಬ ಸಜ್ಜನ ಯುವ ನಾಯಕ. ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಚೈತನ್ಯ ಹೆಚ್ಚಿದೆ. ಕ್ಷೇತ್ರದಲ್ಲಿ ಗೋಪಾಲಕೃಷ್ಣ ಬೇಳೂರು ಗೆಲುವು ನಿಶ್ಚಿತ. ರಾಜ್ಯದಲ್ಲಿ ಸಹ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪ್ರಜಾಪ್ರಭುತ್ವ ಮೌಲ್ಯ ಉಳಿಸಲು ಕಾಂಗ್ರೆಸ್ ಅನಿವಾರ್ಯ” ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ಚೇತನರಾಜ್ ಕಣ್ಣೂರು ಮಾತನಾಡಿ, “ಬಿಜೆಪಿಯಲ್ಲಿ ಬೆಳೆಯುವವರನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ನಂತರ ರಾಜಕೀಯ ರಂಗದಿಂದ ನಿಷ್ಕ್ರಿಯರಾಗುವ ಚಿಂತನೆ ನಡೆಸಿದ್ದೆವು. ಆದರೆ, ಕ್ಷೇತ್ರವ್ಯಾಪ್ತಿಯಲ್ಲಿರುವ ಸರ್ವಾಧಿಕಾರಿ ರಾಜಕಾರಣವನ್ನು ಬುಡಸಹಿತ ಕಿತ್ತು ಹಾಕಬೇಕು ಎನ್ನುವ ಉದ್ದೇಶದಿಂದ ಕಾಗೋಡು ತಿಮ್ಮಪ್ಪ ಮಾರ್ಗದರ್ಶನದಲ್ಲಿ, ಬೇಳೂರು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ನಾನು ಮತ್ತು ಸಂಗಡಿಗರು ಸೇರಿದ್ದೇವೆ. ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ತಂಡ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ” ಎಂದು ಹೇಳಿದರು.
ಇದನ್ನೂ ಓದಿ: Shivamogga News: ಬಿಜೆಪಿಗೆ ಗುಡ್ ಬೈ ಹೇಳಿದ ಚೇತನರಾಜ ಕಣ್ಣೂರು; ಶೀಘ್ರ ಮುಂದಿನ ನಿರ್ಧಾರ
ಇದೇ ಸಂದರ್ಭದಲ್ಲಿ ರವಿಕುಮಾರ್ ಯಡೇಹಳ್ಳಿ, ಮಂಜುನಾಥ ಬ್ಯಾಣದ್, ಆನಂದ್ ಮೇಸ್ತ್ರಿ, ಷಣ್ಮುಖಪ್ಪ, ಚಂದ್ರಶೇಖರ್ ಮಡಸೂರು ಸೇರಿದಂತೆ ಸುಮಾರು 100 ಜನರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಸುಮಂಗಲ ರಾಮಕೃಷ್ಣ, ಮಧುಮಾಲತಿ, ಜ್ಯೋತಿ ಕೋವಿ, ಚಂದ್ರಪ್ಪ, ಗಣಪತಿ ಮಂಡಗಳಲೆ, ಮಲ್ಲಿಕಾರ್ಜುನ ಹಕ್ರೆ, ಕಲಸೆ ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಮಹಾಬಲ ಕೌತಿ, ಅನ್ವರ್ ಇನ್ನಿತರರು ಹಾಜರಿದ್ದರು.