ಶಿವಮೊಗ್ಗ: ಸಿಟಿ ಬಸ್ಸೊಂದು ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದಿದೆ. ಘಟನೆಯಿಂದಾಗಿ ಬೈಕ್ ಸವಾರ ತೀವ್ರ ತರವಾಗಿ ಗಾಯಗೊಂಡಿದ್ದಾನೆ. ಸ್ಥಳದಲ್ಲಿದ್ದ ಆಕ್ರೋಶಿತ ಯುವಕರು ಸಿಟಿ ಬಸ್ಸಿನ ಗಾಜನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಮಹಾವೀರ ವೃತ್ತದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: Shivamogga Rural Election Results: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದೆಗೆ ಕೃಪೆ; ಮತ್ತೆ ಜೆಡಿಎಸ್ ತೆಕ್ಕೆಗೆ ಕ್ಷೇತ್ರ
ಮಹಾವೀರ ವೃತ್ತದಲ್ಲಿ ಗೋಪಿ ವೃತ್ತದ ಕಡೆಯಿಂದ ಬಂದ ಸಿಟಿ ಬಸ್ಸು ಸಿಗ್ನಲ್ ಜಂಪ್ ಮಾಡಿ ರೈಲ್ವೆ ನಿಲ್ದಾಣದ ರಸ್ತೆ ಕಡೆ ನುಗ್ಗಿದೆ. ಆದರೆ ಇದೇ ವೇಳೆ ಸರ್.ಎಂ.ವಿ.ರಸ್ತೆ ಕಡೆಯಿಂದ ಸಿಗ್ನಲ್ ಬಿಟ್ಟಿದ್ದರಿಂದ ಇಕ್ಬಾಲ್ ಮೊಹಮದ್ (69) ಹೆಸರಿನ ವ್ಯಕ್ತಿ ಹೊಂಡಾ ಆ್ಯಕ್ಟಿವಾ ಬಂದಿದ್ದು, ಅದು ಸಿಟಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನೆಲಕ್ಕೆ ಬಿದ್ದ ಪರಿಣಾಮ ಆತನ ತಲೆಗೆ ಗಾಯವಾಗಿದೆ. ತಕ್ಷಣ ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನ ಚಾಲಕನ ತಪ್ಪಿನಿಂದಾಗಿ ರೊಚ್ಚಿಗೆದ್ದ ಸ್ಥಳೀಯ ಯುವಕರು ಸಿಟಿ ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕ ಪ್ರದೀಪನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಬಸ್ಸಿನ ಗಾಜನ್ನು ಒಡೆದು ಹಾಕಿದ್ದಾರೆ. ಇದರಿಂದ ಡ್ರೈವರ್ ಬಸ್ಸು ಬಿಟ್ಟು ಕೆಳಕ್ಕೆ ಇಳಿದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಬಸ್ಸು ಮತ್ತು ಬೈಕ್‌ನ್ನು ಟ್ರಾಫಿಕ್ ಪೊಲೀಸರು ತೆಗೆದುಕೊಂಡು ಹೋಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.