ಸೊರಬ: ಪುರಸಭೆಯ ನೂತನ ಕಟ್ಟಡವನ್ನು ಶ್ರೀ ರಂಗನಾಥ ದೇವಸ್ಥಾನದ ಸಮೀಪದಲ್ಲಿ ತೆರವುಗೊಳಿಸಲಾದ ಹಳೆ ತಾಲೂಕು ಕಚೇರಿಯ (Taluk Office) ಆವರಣದಲ್ಲಿ ನಿರ್ಮಾಣ ಮಾಡುವಂತೆ ಪಟ್ಟಣದ ಪುರಸಭೆಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಗುರುವಾರ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು ನಿರ್ಮಿಸಬೇಕೆಂಬ ನಿರ್ಣಯವನ್ನು ಸಭೆ ತೆಗೆದುಕೊಂಡಿತು.
ಇದನ್ನೂ ಓದಿ: Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?
ಪಟ್ಟಣದ ಸರ್ವೆ ನಂ. 113ರಲ್ಲಿ 1 ಎಕರೆ ಜಾಗದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಖಾಸಗಿ ಬಸ್ ನಿಲ್ದಾಣದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಹಾಗೂ ಅಬಕಾರಿ ಇಲಾಖೆಯನ್ನು ಜನಸಂದಣಿ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಲು ಸಚಿವರು ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಸಂಪೂರ್ಣ ಆಡಳಿತ ಯಂತ್ರ ಕುಸಿದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಮಧು ಬಂಗಾರಪ್ಪ, ಸಭೆಯಲ್ಲಿದ್ದ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರಿಗೆ ಆಡಳಿತ ಸುಧಾರಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ನಿವೇಶನ ಖಾತೆ, ನಿರಾಕ್ಷೇಪಣ ಪತ್ರ, ಇ- ಸ್ವತ್ತು ಸೇರಿದಂತೆ ಸಾರ್ವಜನಿಕರಿಗೆ ಅವಶ್ಯವಿರುವ ಹಕ್ಕು ದಾಖಲೆಗಳನ್ನು ಪಡೆಯಲು ಅಲೆದಾಡುವ ಬಗ್ಗೆ ಜನರಿಂದ ದೂರು ಕೇಳಿ ಬರುತ್ತಿವೆ. ಅಧಿಕಾರಿಗಳು ಕರ್ತವ್ಯ ನಿಷ್ಠೆ ಜತೆಗೆ ಸಾರ್ವಜನಿಕರ. ಕುಂದು – ಕೊರತೆಗಳನ್ನು ಆಲಿಸಿ ಅವರ ಕೆಲಸ, ಕಾರ್ಯಗಳಿಗೆ ತೊಂದರೆಯಾಗದಂತೆ ಜನಸ್ನೇಹಿ ಆಡಳಿತ ನೀಡಲು ಮುಂದಾಗುವಂತೆ ತಿಳಿಸಿದರು.
ಇದನ್ನೂ ಓದಿ: Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?
ಸಭೆಯಲ್ಲಿ ಸಾಗರ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಹುಸೇನ್ ಸರಾಕವಾಸ್, ಜಿಲ್ಲಾ ನಗರೋತ್ಥಾನ ಯೋಜನಾಧಿಕಾರಿ ಮನೋಹರ, ಇಒ ಪ್ರದೀಪಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ, ಲೋಕೋಪಯೋಗಿ ಎಂಜಿನಿಯರ್ ಚಂದ್ರಪ್ಪ, ಮೆಸ್ಕಾಂ ಎಂಜಿನಿಯರ್ ಸತ್ಯಪ್ರಕಾಶ್, ಗಣಪತಿ ನಾಯಕ್, ಹರೀಶ್, ಕಿರಣಕುಮಾರ್, ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ.ಉಮೇಶ್, ಈರೇಶ್ ಮೇಸ್ತ್ರಿ, ಮಧುರಾಯ್ ಜಿ, ಶೇಟ್, ಪ್ರಸನ್ನ ಕುಮಾರ್ ದೊಡ್ಮನೆ ಸೇರಿದಂತೆ ಪುರಸಭಾ ಸದಸ್ಯರುಗಳು ಹಾಜರಿದ್ದರು.