ಸೊರಬ: ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಪೊಲೀಸ್ ಇಲಾಖೆ (Police Department) ವತಿಯಿಂದ ಶನಿವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಾಥಾವು ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತದ ವರೆಗೆ ನಡೆಯಿತು. ಜಾಥಾದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಟೋ ಚಾಲಕರು ಪಾಲ್ಗೊಂಡಿದ್ದರು.
ಪೊಲೀಸ್ ವೃತ್ತ ನಿರೀಕ್ಷಕ ಎಲ್. ರಾಜಶೇಖರ್ ಜಾಥಾ ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ. ಜತೆಗೆ, ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನನ್ನು ಪಾಲನೆ ಮಾಡುವ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಬೇಕೆ? ಈ ಟಿಪ್ಸ್ ಫಾಲೋ ಮಾಡಿ
ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಸಹ ಅಪರಾಧವಾಗಿದೆ. ತಮ್ಮ ಮನೆ, ವಾಸ ಸ್ಥಳದ ಸುತ್ತ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸಮಾಜದ ರಕ್ಷಣೆಗೆ ಇಲಾಖೆ ಸದಾ ಸನ್ನದ್ಧ ಎಂದರು.
ಇದನ್ನೂ ಓದಿ: Vastu Tips: ಅದೃಷ್ಟ, ಸಂಪತ್ತು ಹೊತ್ತು ತರುವ ಬಿದಿರನ್ನು ಹೀಗೆ ಬೆಳೆಸಿ
ಪಿಎಸ್ಐ ಎಚ್.ಎನ್. ನಾಗರಾಜ್, ಹೆಡ್ ಕಾನ್ಸ್‌ಟೇಬಲ್ ಗಳಾದ ನಾಗೇಶ್, ನಾಗರಾಜ್, ಗಿರೀಶ್, ಸಿಬ್ಬಂದಿ ಹನುಮಂತಪ್ಪ, ಇರ್ಷಾದ್, ಸುನೀಲ್ ಬನ್ನಿಕೊಪ್ಪ, ಪರಮಪ್ಪ, ಉಮೇಶ್, ಸೇರಿದಂತೆ ಶಾಲಾ ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು.