Site icon Vistara News

Shivamogga News: ಅ.15ರಿಂದ ಚಂದ್ರಗುತ್ತಿಯ ರೇಣುಕಾಂಬ ದೇವಿಯ ದಸರಾ ಉತ್ಸವ

Dussehra utsava of Sri renukamba Devi from October 15 Dr R Shridhar Hultikoppa information

ಸೊರಬ: ಶ್ರೀ ರೇಣುಕಾಂಬ ದಸರಾ ಉತ್ಸವ ಆಚರಣಾ ಸಮಿತಿ, ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ, ಗ್ರಾಪಂ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ 8ನೇ ವರ್ಷದ ಶ್ರೀ ರೇಣುಕಾಂಬ ದೇವಿಯ (Sri Renukamba Devi) ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರೇಣುಕಾಂಬ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಅ.15ರಂದು ಸಂಜೆ 6.30ಕ್ಕೆ ಕಾರ್ಯಕ್ರಮವನ್ನು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ಎಚ್. ರಾಮಪ್ಪ ಸಾನ್ನಿಧ್ಯ ವಹಿಸುವರು. ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ಎಂ.ಬಿ. ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಮಾಜಿ ಸದಸ್ಯ ಎನ್.ಜಿ. ನಾಗರಾಜ್, ರಘು ಎಂ. ಸ್ವಾಧಿ ಸೇರಿದಂತೆ ಇತರರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ನಾಗರೀಕ ಸನ್ಮಾನ ಏರ್ಪಡಿಸಲಾಗಿದೆ. ಸಭಾ ಕಾರ್ಯಕ್ರಮದ ನಂತರ ಶಿರಸಿ ನಾಟ್ಯ ದೀಪ ಕಲ್ಚರಲ್ ಟೀಮ್ ವತಿಯಿಂದ ಭರತನಾಟ್ಯ ಮತ್ತು ರೂಪಕ ನಡೆಯಲಿದೆ. ನವರಾತ್ರಿ ಉತ್ಸವ ಅಂಗವಾಗಿ ನಿತ್ಯ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಇದನ್ನೂ ಓದಿ: Emergency Alert : ಏಕಕಾಲಕ್ಕೆ ರಿಂಗ್ ಆದ ಪ್ಯಾನ್ ಇಂಡಿಯಾ ಅಲರ್ಟ್ ಕ್ಯಾಂಪೇನ್

ಅ.16ರಂದು ನಡೆಯುವ ಕಾರ್ಯಕ್ರಮವನ್ನು ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆ. ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಮಹಿಳಾ ನಾಟಕ ಸಂಘದಿಂದ ಪೌರಾಣಿಕ ನಾಟಕ ರಕ್ತರಾತ್ರಿ ಪ್ರದರ್ಶನವಾಗಲಿದೆ. ಅ. 17ರಂದು ನಡೆಯುವ ಕಾರ್ಯಕ್ರಮವನ್ನು ವಿಪ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಉದ್ಘಾಟಿಸಲಿದ್ದು, ಪ್ರಹ್ಲಾದ ಆಚಾರ್ಯ ಬೆಂಗಳೂರು ಇವರಿಂದ ಶಾಡೋ ಪ್ಲೇ ಮತ್ತು ಮಾತನಾಡುವ ಗೊಂಬೆ ಪ್ರದರ್ಶನ ವಾಗಲಿದೆ. ಅ. 18ರಂದು ನಡೆಯುವ ಕಾರ್ಯಕ್ರಮವನ್ನು ಶಿರಸಿಯ ಶಾಸಕ ಭೀಮಣ್ಣ ಟಿ. ನಾಯ್ಕ್ ಉದ್ಘಾಟನೆ ಮಾಡಲಿದ್ದು, ನಂತರ ಶಿವಮೊಗ್ಗದ ಶ್ರೀ ಮಹಾಗಣಪತಿ ಯಕ್ಷಕಲಾ ಬಳಗದಿಂದ ಅಂಭಾ ಶಪಥ ಯಕ್ಷಗಾನ ಪ್ರದರ್ಶನವಾಗಲಿದೆ ಎಂದರು.

ಅ.19ರಂದು ನಡೆಯುವ ಕಾರ್ಯಕ್ರಮವನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟನೆ ಮಾಡಲಿದ್ದು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಂತರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ನಾಟ್ಯ ಸಂಘದ ಅನ್ಯಾಯ ಅಳಿಯಿತು ಸ್ನೇಹ ಬೆಳೆಯಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

ಅ. 20ರಂದು ನಡೆಯುವ ಕಾರ್ಯಕ್ರಮವನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟನೆ ಮಾಡಲಿದ್ದು, ನಂತರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಹವ್ಯಾಸಿ ಬಯಲಾಟ ಕಲಾ ಮಂಡಳಿಯಿಂದ ಕಾಲಜಂಗನ ವಧೆ ಬಯಲಾಟ ಕಾರ್ಯಕ್ರಮ, ಅ.21ರಂದು ನಡೆಯುವ ಕಾರ್ಯಕ್ರಮವನ್ನು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಶಿವಮೊಗ್ಗದ ಹರ್ಲಾಪುರ ಸಹೋದರರಿಂದ ದಾಸವಾಣಿ ಮತ್ತು ಆಲಳ್ಳಿ ಶ್ರೀ ವೀರಭದ್ರೇಶ್ವರ ಕಲಾ ಮಂಡಳಿಯವರಿಂದ ರೇಣುಕಾ ಚರಿತ್ರೆ ನಾಟಕ ನಡೆಯಲಿದೆ ಎಂದರು.‌

ಇದನ್ನೂ ಓದಿ: IND vs ENG: ಭಾರತ-ಇಂಗ್ಲೆಂಡ್​ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಮೋದಿ,ಸುನಕ್‌

ಅ.22ರಂದು ನಡೆಯುವ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟನೆ ಮಾಡಲಿದ್ದು, ತುಮಕೂರಿನ ಜ್ಯೋತಿ ಮೆಲೋಡಿಯಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ. ಅ.23ರಂದು ನಡೆಯುವ ಕಾರ್ಯಕ್ರಮವನ್ನು ಅನಿತಾ ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಸಾಗರದ ನಾಟ್ಯ ತರಂಗ ಟ್ರಸ್ಟ್ ನವರಿಂದ ನವದುರ್ಗಾ ವೈಭವ ಪ್ರದರ್ಶನವಾಗಲಿದೆ. ನಿತ್ಯ ಕಾರ್ಯಕ್ರಮದ ತರುವಾಯ ಅನ್ನಸಂತರ್ಪಣೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾಗುವಂತೆ ವಿನಂತಿಸಿದರು.‌

ಇದನ್ನೂ ಓದಿ: Media Awards : ನೀವು ಉತ್ತಮ ವರದಿ ಮಾಡಿದ್ದೀರಾ? ಒಳ್ಳೆ ಆ್ಯಂಕರಾ?: ಹಾಗಿದ್ರೆ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಹಾಕಿ

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ, ತಾಪಂ ಮಾಜಿ ಸದಸ್ಯರಾದ ಎನ್.ಜಿ. ನಾಗರಾಜ್, ಸುನೀಲ್ ಗೌಡ, ಪ್ರಮುಖರಾದ ರಘು ಎಂ. ಸ್ವಾದಿ, ವಸಂತ್ ಎನ್. ಶೇಟ್, ಮಂಜುನಾಥ ಶಣೈ, ಪ್ರಜ್ವಲ್ ಸೇರಿದಂತೆ ಇತರರಿದ್ದರು.

Exit mobile version