ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಮಂಗಳವಾರ ದೀಪಾವಳಿ ಬಲಿಪಾಡ್ಯಮಿ (Diwali Balipadyami) ಹಬ್ಬದ ಅಂಗವಾಗಿ ಗೋ ಪೂಜೆ ನೆರವೇರಿಸುವುದರೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರೈತರು ತಮ್ಮ ಜಾನುವಾರುಗಳಿಗೆ ಬಗೆ ಬಗೆಯ ಬಲೂನ್ ಮತ್ತು ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಿ ಹಾಗೂ ಕೊಟ್ಟಿಗೆ ಬಾಗಿಲುಗಳಿಗೆ ತಳಿರು ತೋರಣ ಅಲಂಕಾರ ಮಾಡಲಾಗಿತ್ತು. ಹಸು-ಕರು, ಎತ್ತುಗಳ ಮೈ ತೊಳೆದು ಶುದ್ಧಗೊಳಿಸಿ ಮೈಯಿಗೆ ಬಣ್ಣ ಬಣ್ಣದ ಪಟ್ಟೆ ಬಳಿದು, ಅಲಂಕರಿಸಿ ಪೂಜಿಸಿದರು.
ಗೋ ಪೂಜೆ
ಅಕ್ಕಿ, ಬೆಲ್ಲ, ಬಾಳೆಹಣ್ಣು ಮಿಶ್ರಣದ ಗೋಗ್ರಾಸ ಮತ್ತು ಕಡುಬನ್ನು ಗೋವುಗಳಿಗೆ ನೈವೇದ್ಯವಾಗಿ ನೀಡಿ ಪಾದ ಪೂಜೆಯನ್ನು ಸಲ್ಲಿಸಿ, ಭಕ್ತಿಯಿಂದ ಪ್ರಾರ್ಥಿಸಿದರು.
ಇದನ್ನೂ ಓದಿ: ದುಬೈನಲ್ಲಿ ಶೀಘ್ರ ಜಗತ್ತಿನ ಅತಿದೊಡ್ಡ, ಜನನಿಬಿಡ ವಿಮಾನ ನಿಲ್ದಾಣ!
ಗ್ರಾಮಸ್ಥರು ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು. ಇನ್ನು ಹಬ್ಬದ ಹೋರಿಗಳಾದ ಚಂದ್ರಗುತ್ತಿ ಚಕ್ರವರ್ತಿ, ಚಂದ್ರಗುತ್ಯಮ್ಮ, ಬೆಳ್ಳಿ ಕುದುರೆ ಹೋರಿಗಳ ಹಾಗೂ ವಿವಿಧ ಹೆಸರಿನ ಹೋರಿಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಜೋರಾಗಿಯೇ ಕೇಳಿ ಬರುತ್ತಿತ್ತು ಹಾಗೂ ಹೂಗಳನ್ನು ಹಾಕಿ ಸ್ವಾಗತಿಸುತ್ತಿದ್ದರು.
ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಧಿಸೂಚಿತ ದೇವಾಲಯಗಳಲ್ಲಿ ಗೋ ಪೂಜೆ ಆಚರಣೆಗೆ ಮುಜರಾಯಿ ಇಲಾಖೆ ಸೂಚನೆ ನೀಡಿದ್ದು ಈ ಹಿನ್ನಲೆಯಲ್ಲಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆಯನ್ನು ಸಂಪ್ರದಾಯದಂತೆ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು. ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್ ಶಿವಪ್ರಸಾದ್, ದೇವಸ್ಥಾನದಲ್ಲಿ ನಡೆದ ಗೋವುಗಳ ಪೂಜೆಗೆ ಚಾಲನೆ ನೀಡಿದರು.
ಇದನ್ನೂ ಓದಿ: Opposition leader : ನ.17ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ; ವಿಪಕ್ಷ ನಾಯಕ ಯಾರು?
ಕೃಷಿಕರು ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಫಸಲು ತಂದು ದೇವರಿಗೆ ಅರ್ಪಿಸಿ ವಿಶೇಷ ಪೂಜೆ, ಸಿಹಿ ಕಜ್ಜಾಯ, ಬಗೆ ಬಗೆಯ ನೈವೇದ್ಯಗಳನ್ನು ಅರ್ಪಿಸಿದರು.