ಶಿವಮೊಗ್ಗ: ನಗರದ ಸೋಮಿನಕೊಪ್ಪ ಕೆಎಚ್‌ಬಿ ಪ್ರೆಸ್ ಕಾಲೊನಿಯ ದೊಡ್ಡಮ್ಮ ದೇವಿ ದೇವಸ್ಥಾನದ ಅನುಗ್ರಹ ರಾಷ್ಟ್ರೀಯ ಪುರಸ್ಕಾರಕ್ಕೆ (Doddamma Devi National Award) ಕಲಬುರಗಿಯ ಕುಷ್ಠ ರೋಗಿಗಳ ಆಶಾಕಿರಣ, ಆಟೋ ಚಾಲಕ ಹಣಮಂತ ದೇವನೂರ ಅವರನ್ನು ಆಯ್ಕೆ ಮಾಡಿದ್ದು ಅ.24ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪುರಸ್ಕಾರ ಆಯ್ಕೆ ಸಮಿತಿ ಸಂಚಾಲಕ ಎಂ.ಎನ್. ಸುಂದರರಾಜ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್‌ನಿಂದ ದೇವಿಯ ಹೆಸರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ. 24ರ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಮಾಜದಲ್ಲಿ ಬಡವರು, ದೀನ ದಲಿತರು, ಅಂಗವಿಕಲರು, ರೋಗಿಗಳ ಪರ ಸಮಾಜಕಾರ್ಯಗಳಲ್ಲಿ ತೊಡಗಿಕೊಂಡವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ಕಲಬುರಗಿಯಲ್ಲಿ ರಿಕ್ಷಾ ಚಾಲಕನಾಗಿ 22 ವರ್ಷಗಳಿಂದ ಕುಷ್ಠ ರೋಗಿಗಳ ಸೇವೆ ಮಾಡುತ್ತಿರುವ ಕರ್ಮಯೋಗಿ ಹಣಮಂತ ದೇವನೂರ ಅವರಿಗೆ ಘೋಷಿಸಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ ಎಂದವರು ವಿವರಿಸಿದರು.
ಇದನ್ನೂ ಓದಿ: Big Pumpkin: ಹಿತ್ತಲಿನಲ್ಲಿ ಯಾರೂ ಎತ್ತಲಾರದಂಥ 1247 ಕೆಜಿ ತೂಕದ ಕುಂಬಳಕಾಯಿ ಬೆಳೆದ ಶಿಕ್ಷಕ!
ಮಹಾತ್ಮ ಗಾಂಧಿ ಲೆಪ್ರಸಿ ಸೊಸೈಟಿ ಸ್ಥಾಪಿಸಿರುವ ಹಣಮಂತ ಅವರು ಭಿಕ್ಷೆ ಬೇಡುವ, ಮನೆಯಿಂದ ಹೊರಹಾಕಲ್ಪಟ್ಟ, ಸಮಾಜದಿಂದ ಬಹಿಷ್ಕೃತರಾದ ಕುಷ್ಠ ರೋಗಿಗಳನ್ನು ಕರೆತಂದು ಅವರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸೌಂದರ್ಯ ಲಹರಿ ಉಪಾಸಕಿ ಶಿವಮೊಗ್ಗದ ಅಶೋಕನಗರದ ಕಾಮಾಕ್ಷಮ್ಮ ಅವರಿಗೆ ಶ್ರೀ ಲಲಿತಾ ಪುರಸ್ಕಾರವನ್ನು ಐದು ಸಾವಿರ ರೂ. ನಗದಿನೊಂದಿಗೆ ನೀಡಲಾಗುವುದು. ಮಾಗಡಿಯ ಪೋಲೋಹಳ್ಳಿಯ ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಪ್ರಶಸ್ತಿ ಪ್ರದಾನ ಮಾಡುವರು. ಟ್ರಸ್ಟಿನ ಅಧ್ಯಕ್ಷ, ಉಪಾಸಕ ಸಿದ್ದಪ್ಪಾಜಿ ಅಧ್ಯಕ್ಷತೆ ವಹಿಸುವರು ಎಂದರು.
ಇದನ್ನೂ ಓದಿ: IND vs AFG : ಭಾರತ ತಂಡದ ಗೆಲುವಿಗೆ 273 ರನ್ಗಳ ಗುರಿಯೊಡ್ಡಿದ ಅಪಘಾನಿಸ್ತಾನ
ಈ ವೇಳೆ ದೇವಸ್ಥಾನ ಸಮಿತಿಯ ನರಸಿಂಹ, ಪುರುಷೋತ್ತಮ ಉಪಸ್ಥಿತರಿದ್ದರು.