Site icon Vistara News

Shivamogga News: ಗ್ರಾಮೀಣ ಮಕ್ಕಳಲ್ಲಿ ಜನಪದ ಸಂಸ್ಕೃತಿ ಉಳಿದುಕೊಳ್ಳಲಿ: ಗುಡ್ಡಪ್ಪ ಜೋಗಿ

#image_title

ರಿಪ್ಪನ್‌ಪೇಟೆ: “ರಂಗ ಭೂಮಿ ಮತ್ತು ಜನಪದ ಕಲೆಗಳು ಸಮಾಜವನ್ನು ಜಾಗೃತಗೊಳಿಸುವ ಒಂದು ಸಾಧನ. ಪ್ರಕೃತಿಯ ನಂಟಿನೊಂದಿಗೆ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಳ್ಳಲು ಅರಂಭಗೊಂಡಂತಹ ಕಲೆ ಜನಪದ ರಂಗ ಕಲೆ” ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ (Shivamogga News) ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ದಿ.ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾತಂಡ ಶಿವಮೊಗ್ಗ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ “ಹಳ್ಳಿ ಮಕ್ಕಳ ರಂಗಹಬ್ಬ 2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ನಾಡಿನಲ್ಲಿ 300ಕ್ಕೂ ಅಧಿಕ ಕಲೆಗಳಿದ್ದು, ಅದರಲ್ಲಿ ಕೊನೆಯ ಕಲೆ ಜಾನಪದವಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ನಮ್ಮ ಮೂಲ ಜನಪದ ಸಂಸ್ಕೃತಿಗೆ ಧಕ್ಕೆ ಬಂದಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್‌ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ

“ನಾಟಕ ಹಾಗೂ ರಂಗಭೂಮಿಯಂತಹ ಕಲೆಗಳಿಂದ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಪ್ರಯತ್ನದಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಿವೆ” ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೊ.ಟಿ.ಚಂದ್ರಶೇಖರ್ ಮಾತನಾಡಿ, “ಮಕ್ಕಳಲ್ಲಿ ಜಾನಪದದ ಜಾಗೃತಿ ಮೂಡಿಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳು ದಿನದ 24 ಗಂಟೆಯೂ ಮೊಬೈಲ್ ಬಳಸುವುದರಿಂದ ಮಾನಸಿಕವಾಗಿ ಕುಬ್ಜರಾಗುತ್ತಾರೆ. ಮಕ್ಕಳು ಸದಾ ಕ್ರಿಯಾಶೀಲರಾಗಿ, ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಳ್ಳಿ ಮಕ್ಕಳ ರಂಗ ಹಬ್ಬ ಕಾರ್ಯಕ್ರಮ ಉಪಯುಕ್ತವಾಗಿದೆ” ಎಂದರು.

ಇದನ್ನೂ ಓದಿ: Karnataka Election 2023: ಶಿವಮೊಗ್ಗದಲ್ಲಿ ನೂತನ ಕಾರ್ಯಾಲಯ ಆರಂಭಿಸಿದ ಆಯನೂರು ಮಂಜುನಾಥ್; ಕಾಂಗ್ರೆಸ್ಸೋ, ಪಕ್ಷೇತರವೋ?

ಎಸ್.ಡಿ.ಎಂ.ಸಿ. ನಿರ್ದೇಶಕಿ ದಿವ್ಯ ಮಹೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಶಾಂತರಾಜ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾಸಲ್ ಮಣಿ, ಸೀಮಾಭಾಸ್ಕರ್ ಶೆಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಶಾಂತರಾಜ್ ಸಂಚಾಲಕ ಹರೀಶ್‌ಕುಮಾರ್ ಹಾಜರಿದ್ದರು. ಪಂಚಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆರ್.ಡಿ.ಶೀಲಾ ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಡಾ.ಗಣೇಶ್ ಕೆಂಚನಾಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version