Site icon Vistara News

Shivamogga News: ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Hori festival in chikkamakoppa village, soraba taluk

ಸೊರಬ: ಗ್ರಾಮೀಣ ಭಾಗದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು (Shivamogga News) ತಾಲೂಕಿನ ಚಂದ್ರಗುತ್ತಿ ಸಮೀಪದ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 150ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ ನೋಡುಗರ ಗಮನ ಸೆಳೆಯಿತು. ಹೋರಿ ಹಬ್ಬ ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು. ಪೀಪಿ ಹೋರಿಗಳು ಅಖಾಡದಲ್ಲಿ ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿ ಬಂದವು.

ಇದನ್ನೂ ಓದಿ:Hampi Utsav 2024: ಹಂಪಿ ಉತ್ಸವದಲ್ಲಿ ಅದ್ಧೂರಿಯಾಗಿ ನಡೆದ ಜಾನಪದ ವಾಹಿನಿ ಮೆರವಣಿಗೆ

ಅಖಾಡದಲ್ಲಿ ಚಂದ್ರಗುತ್ತಿಯ ಚಕ್ರವರ್ತಿ, ಯಡಗೊಪ್ಪದ ಬಡವ ಸಾಕಿದ ಬಹದ್ದೂರ್, ಮದರವಳ್ಳಿ ಡೇಂಜರ್ ಮುತ್ತು, ಚಂದ್ರಗುತ್ತಿ ಡಾನ್, ಬಳ್ಳಿಬೈಲು ಅಗ್ನಿ, ಭದ್ರಾಪುರ ವಾಲ್ಮೀಕಿ ಹುಲಿ, ಭದ್ರಾಪುರದ ಬ್ರಹ್ಮ, ಚಂದ್ರಗುತ್ತಿ ಅಧೀರ, ಮಗರವಳ್ಳಿ ಅಶ್ವಮೇಧ, ಬನವಾಸಿ ವರದಾ ಎಕ್ಸ್ ಪ್ರೆಸ್, ಅಂಕರವಳ್ಳಿ ಬಸವೇಶ್ವರ, ಗುಡುವಿ ಜಮೀನ್ದಾರ, ತರಲಘಟ್ಟ ವಾಯುಪುತ್ರ, ಓಟೂರು ಆರ್ಮಿ ಹುಲಿ, ಮಾರಿಗುಡಿ ಕಾ ರಾಜ, ಗ್ರಾಮದ ಹೋರಿಗಳಾದ ದೊಡ್ಮನೆ ಚಿನ್ನಾ, ಸೀತಾ ರಾಮೇಶ್ವರ, ಶ್ರೀ ನಂದಿ, ಜೈ ಹನುಮ, ವಾಯುಪುತ್ರ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.

ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವದಲ್ಲಿ ಅದ್ಧೂರಿಯಾಗಿ ನಡೆದ ಜಾನಪದ ವಾಹಿನಿ ಮೆರವಣಿಗೆ

ಹೋರಿ ಹಬ್ಬದ ಆಯೋಜಿಸಿದ್ದ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗದವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಪೈಲ್ವಾನರನ್ನು ಗುರುತಿಸಲಾಯಿತು.

Exit mobile version