Site icon Vistara News

Shivamogga News: ಹೊಸನಗರ ತಾ.ಪಂ ಕೆಡಿಪಿ ಸಭೆ; ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು

Hosanagara Taluk Panchayat KDP Meeting

ಹೊಸನಗರ: ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ವಿನಾಕಾರಣ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಲಯ ಅರಣ್ಯಾಧಿಕಾರಿಗಳನ್ನು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಖಾಸಗಿ ಒತ್ತುವರಿಯಷ್ಟೇ ಅಲ್ಲದೇ ಇತ್ತೀಚೆಗೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ನಡೆಸಲೂ ಅಡ್ಡಿ ಪಡಿಸಲಾಗುತ್ತಿದೆ. ರಸ್ತೆ, ಸೇತುವೆ, ಟ್ಯಾಂಕ್, ಮೊಬೈಲ್ ಟವರ್‌ ಕಟ್ಟಲೂ ಬಿಡುತ್ತಿಲ್ಲ. ಕಾಡಿನಲ್ಲಿ ಹಳ್ಳಿ ಜನ ಹೆಣ ಸುಡಲೂ ಬಿಡದಂತೆ ಕಾಡುತ್ತಿದ್ದೀರಿ. ಇಂತಹ ಪರಿಸ್ಥಿತಿ ಆದಲ್ಲಿ ಮಲೆನಾಡಿನ ಜನರು ಬದುಕುವುದು ಹೇಗೆ ಎಂದು ಶಾಸಕರಿಬ್ಬರೂ ಅರಣ್ಯಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಭತ್ತದ ಫಸಲು ರೈತರ ಕೈ ಸೇರುವವರೆಗೆ ಕೃಷಿ ಪಂಪ್‌ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಅಲ್ಲದೇ ಪರಿವರ್ತಕಗಳು ಹಾಳಾದಲ್ಲಿ 24 ಗಂಟೆಯ ಒಳಗಾಗಿ ಬದಲಾವಣೆ ಮಾಡಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ: GST Collection: ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬೇಡಿ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಬಿಇಓ ಕೃಷ್ಣಮೂರ್ತಿಅವರಿಗೆ ತಿಳಿಸಿದರು. ಕೆಲ ಶಾಲೆಗಳಲ್ಲಿ ಮಕ್ಕಳು ಕೊಠಡಿ ಕೊರತೆಯಿಂದ ರಂಗಮಂದಿರದಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಈಗಾಗಲೇ ಕೈಗೆತ್ತಿಕೊಂಡಿರುವ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಅಕ್ರಮ ಮದ್ಯ ಮಾರಾಟದಿಂದ ಯುವ ಜನತೆ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣ ಅವರು ಅಬಕಾರಿ ಅಧಿಕಾರಿಗಳ ವಿರುದ್ಧ ಆರೋಪಿಸಿದರು.

ಇದನ್ನೂ ಓದಿ: Blood Purification: ಈ ಆಹಾರ ಸೇವಿಸಿ, ಉತ್ತಮ ಆರೋಗ್ಯಕ್ಕಾಗಿ ರಕ್ತಶುದ್ಧಿ ಮಾಡಿಕೊಳ್ಳಿ

ಅಕ್ರಮ ಗೋ ಸಾಗಾಣಿಕೆ, ಗಾಂಜಾ ಪ್ರಕರಣ, ಜೂಜು ಮೊದಲಾದ ಕಾನೂನು ಬಾಹಿರ ಕೃತ್ಯಗಳು ತಾಲೂಕಿನಲ್ಲಿ ಎಲ್ಲೇ ನಡೆಯುತ್ತಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ, ಸಿಪಿಐ ಗುರಣ್ಣ ಹೆಬ್ಬಾಳ್ ಅವರಿಗೆ ಸೂಚಿಸಿದರು.

Exit mobile version