ರಿಪ್ಪನ್‌ಪೇಟೆ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟುಕೊಂಡು ಕಾಯುತ್ತಿದೆ. ಹೀಗಿರುವಾಗ ತಾಲೂಕಿನ ನಿವಣೆ ಬಳಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದುದು ಪತ್ತೆಯಾಗಿದೆ. ಅಬಕಾರಿ ಅಧಿಕಾರಿಗಳು ವಾಹನ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.
ಹೊಸನಗರ ತಾಲ್ಲೂಕಿನ ನಿವಣೆ ಗ್ರಾಮದ ಅಗಸನಗದ್ದೆ ಸಮೀಪ ಅಕ್ರಮವಾಗಿ ಓಮ್ನಿ ವಾಹನದಲ್ಲಿ ಸುಮಾರು 198.72 ಲೀಟರ್ ಮದ್ಯವನ್ನು ಸಾಗಾಟ ನಡೆಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಅಬಕಾರಿ ನಿರೀಕ್ಷಕರಾದ ಅಮಿತ್‌ಕುಮಾರ್‌ರವರ ನೇತೃತ್ವದ ತಂಡ ದಾಳಿ ನಡೆಸಿದ್ದು, ಅಕ್ರಮ ಮದ್ಯ ಹಾಗೂ ಓಮ್ನಿ ವಾಹನವನ್ನು ವಶಪಡಿಸಿಕೊಂಡಿದೆ. ಓಮ್ನಿ ಡ್ರೈವರ್ ಪರಾರಿಯಾದ ಘಟನೆ ವರದಿಯಾಗಿದೆ.
ಇದನ್ನೂ ಓದಿ: Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ
ಮಂಗಳವಾರ ಬೆಳಿಗ್ಗೆ ಕೆಎ-30 ಎಂ 0563 ನೋಂದಣಿ ಸಂಖ್ಯೆ ಹೊಂದಿದ ಮಾರುತಿ ಸುಜುಕಿ ಓಮ್ನಿಯಲ್ಲಿ 81,020 ರೂಪಾಯಿ ಬೆಲೆ ಬಾಳುವ ಭಾರತೀಯ ತಯಾರಿಕಾ ಮದ್ಯ 198.72 ಲೀ. ಅನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಅದರ ಬಗ್ಗೆ ನಿಖರವಾದ ಮಾಹಿತಿ ದೊರೆತ ಹಿನ್ನೆಲೆ ಅಬಕಾರಿ ಇಲಾಖೆಯ ಅಧಿಕಾರಿಗಳಾದ ನಾಗರಾಜಪ್ಪ ಟಿ, ಕ್ಯಾಪ್ಟನ್ ಅಜಿತ್‌ಕುಮಾರ್, ಶಿವಪ್ರಸಾದ್ ಅವರು ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆರ್. ಹಾಗೂ ತಹಸೀಲ್ದಾರ್ ಅಮೃತ್ ಆತ್ರೇಶ್‌ರವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಪ್ಲೆಯಿಂಗ್ ಸ್ಟ್ಯಾಂಡ್-07ಸಿ ಹುಂಚ ಹೋಬಳಿ ತಂಡದ ಮುಖ್ಯಸ್ಥರು ಮತ್ತು ಸದಸ್ಯರ ಸಹಕಾರದೊಂದಿಗೆ ವಾಹನ ಮತ್ತು ವಾಹನದ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: Road Accident: ರಿಪ್ಪನ್‌ಪೇಟೆಯಲ್ಲಿ ಬೈಕ್ ಡಿಕ್ಕಿ, ಇಬ್ಬರಿಗೆ ತೀವ್ರ ಗಾಯ
ವಶಪಡಿಸಿಕೊಂಡಿರುವ ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 3,31,020 ರೂಪಾಯಿ ಆಗಿದೆ. ದಾಳಿಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮಲ್ಲಿಕ್ ಕೆ.ಜಿ, ರಾಕೇಶ್ ಎಂ.ಕೆ, ಶಕೀಲ್ ಅಹಮದ್, ವಾಹನ ಚಾಲಕ ಅಮಿತ್ ಬಿ.ಕೆ ಮತ್ತು ಪ್ರಸನ್ನರವರು ಪಾಲ್ಗೊಂಡಿದ್ದರು.